ಅಲಯನ್ಸ್ ವಿವಿಯ ಅಯ್ಯಪ್ಪ ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಪೊಲೀಸರಿಂದ ಗುಂಡೇಟು

Update: 2019-10-20 13:35 GMT

ಬೆಂಗಳೂರು, ಅ.20: ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಡಿ. ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪಿಸ್ತೂಲಿನಿಂದ ಗುಂಡುಹಾರಿಸಿ, ಬಂಧಿಸುವಲ್ಲಿ ಇಲ್ಲಿನ ಆರ್‌ಟಿನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬ್ಯಾಟರಾಯನಪುರದ ಗಣೇಶ್(30) ಬಂಧಿತ ಆರೋಪಿಯಾಗಿದ್ದು, ಸದ್ಯ ಗುಂಡೇಟಿನಿಂದ ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಪೊಲೀಸ್ ಸಬ್ಇನ್ಸ್ ಪೆಕ್ಟರ್(ತರಬೇತಿ ಅವಧಿ)ಯಲ್ಲಮ್ಮ ಹಾಗೂ ಪೇದೆ ಮಲ್ಲಿಕಾರ್ಜುನ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದ ಆರೋಪಿಯು, ಸಂಜಯನಗರದಲ್ಲಿರುವ ಕರ್ನಾಟಕ ಬೀಜ ನಿಗಮ ಮಂಡಳಿಯ ಗೋಡನ್‌ನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದ್ದು, ವಶಕ್ಕೆ ಪಡೆಯಲು ಹೋದ ಪಿಎಸ್ಸೈ ಯಲ್ಲಮ್ಮ, ಪೇದೆ ಮಲ್ಲಿಕಾರ್ಜುನ್ ಮೇಲೆ ಆರೋಪಿ ಗಣೇಶ್ ಏಕಾಏಕಿ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ ಗಾಳಿಯಲ್ಲಿ 1 ಸುತ್ತು ಗುಂಡು ಹಾರಿಸಿ ಆರೋಪಿಯನ್ನು ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮುಂದುವರಿಸಿದ್ದಾನೆ. ಆಗ, ಆತ್ಮರಕ್ಷಣೆಗಾಗಿ ಗಣೇಶ್ ಎಡಗಾಲಿಗೆ 1 ಸುತ್ತು ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ ಎನ್ನಲಾಗಿದೆ.

ಪ್ರಕರಣದಲ್ಲಿ ಆರೋಪಿ ಗಣೇಶ್, ಕೊಲೆಗೆ ಸಂಚು ರೂಪಿಸಿದ್ದ ಎನ್ನುವ ಆರೋಪ ಇದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News