ಬೆಂಗಳೂರು: ವಿಚಾರಣೆ ನಡೆಸುತ್ತಿದ್ದ ವೇಳೆ ಆರೋಪಿಗಳ ಬಿಡುಗಡೆ ಒತ್ತಾಯ; ಠಾಣೆ ಮುಂದೆ ಉದ್ರಿಕ್ತ ವಾತಾವರಣ

Update: 2019-10-20 15:06 GMT

ಬೆಂಗಳೂರು, ಅ.20: ಸಾರ್ವಜನಿಕರ ದೂರಿನ ಹಿನ್ನೆಲೆ ಮೂವರು ವ್ಯಕ್ತಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ವೇಳೆ ಗುಂಪೊಂದು ಆಗಮಿಸಿ ಆರೋಪಿಗಳ ಬಿಡುಗಡೆ ಒತ್ತಾಯಕ್ಕೆ ಪಟ್ಟು ಹಿಡಿದಿದ್ದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ನಗರದ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉರೂಸ್ ನಡೆದಿತ್ತು. ಆ ಸಂದರ್ಭದಲ್ಲಿ ಮೂವರ ಬಳಿ ಮಾರಕಾಸ್ತ್ರಗಳು ಇರುವುದು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರನ್ವಯ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ, ತಡ ರಾತ್ರಿ 30 ರಿಂದ 40 ಮಂದಿಯ ಗುಂಪು ಠಾಣೆ ಬಳಿ ಬಂದಿದ್ದು, ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿದೆ ಎನ್ನಲಾಗಿದೆ.

ಈ ವೇಳೆ ಬಹುತೇಕ ಸಿಬ್ಬಂದಿಗಳು ರಾತ್ರಿ ಗಸ್ತಿಗೆ ತೆರಳಿದ್ದು, ಒಂದಿಬ್ಬರು ಮಾತ್ರ ಠಾಣೆಯಲ್ಲಿದ್ದರು. ಗುಂಪು ಠಾಣೆ ಬಳಿ ಬರುತ್ತಿದ್ದಂತೆ ಹೊರಗಡೆ ಇದ್ದ ಸಿಬ್ಬಂದಿ ಠಾಣೆಗೆ ವಾಪಸ್ಸಾಗಿದ್ದಾರೆ. ಈ ಸಮಯದಲ್ಲಿ ಕೆಲ ಕಿಡಿಗೇಡಿಗಳು ಠಾಣೆ ಹೊರಗಡೆ ನಿಲ್ಲಿಸಿದ್ದ ಹಳೇ ವಾಹನಗಳನ್ನು ಜಖಂಗೊಳಿಸಲು, ಕಲ್ಲು ತೂರಾಟ ನಡೆಸಲು ಯತ್ನಿಸಿತ್ತು. ತಕ್ಷಣವೇ ಬಂದ ಇತರ ಸಿಬ್ಬಂದಿಗಳು ಗುಂಪನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ನೀಡಲು ಹಿರಿಯ ಅಧಿಕಾರಿಗಳು ನಿರಾಕರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News