ಕನಿಷ್ಠ 6ರಿಂದ 10 ಪಾಕ್ ಯೋಧರ ಸಾವು: ಸೇನಾ ವರಿಷ್ಠ ಬಿಪಿನ್ ರಾವತ್

Update: 2019-10-20 17:23 GMT

 ಹೊಸದಿಲ್ಲಿ, ಅ. 20: ಹೊಸದಿಲ್ಲಿ, ಅ. 20: ಗಡಿ ನಿಯಂತ್ರಣ ರೇಖೆಯ ತಂಗಧರ್ ಮೂಲಕ ಭಾರತೀಯ ಭೂಭಾಗದ ಒಳಗೆ ನುಸುಳಲು ಭಯೋತ್ಪಾದಕರು ಪ್ರಯತ್ನಿಸಿದ ಬಳಿಕ, ಭಾರತೀಯ ಸೇನೆ ಕನಿಷ್ಠ 6ರಿಂದ 10 ಪಾಕಿಸ್ತಾನಿ ಯೋಧರನ್ನು ಹತ್ಯೆಗೈದಿದೆ ಹಾಗೂ ಮೂರು ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿದೆ ಎಂದು ಭಾರತೀಯ ಸೇನಾ ವರಿಷ್ಠ ಬಿಪಿನ್ ರಾವತ್ ಹೇಳಿದ್ದಾರೆ.

ಭಾರತೀಯ ಸೇನೆ ಕುಪ್ವಾರದ ತಂಗಧಾರ್ ವಲಯದ ವಿರುದ್ಧ ದಿಕ್ಕಿನಲ್ಲಿರುವ ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದ ನಿಲಂ ಕಣಿವೆಯಲ್ಲಿದ್ದ ನಾಲ್ಕು ಭಯೋತ್ಪಾದಕ ಶಿಬಿರಗಳ ಮೇಲೆ ರವಿವಾರ ಪಿರಂಗಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 6ರಿಂದ 10 ಪಾಕಿಸ್ತಾನ ಸೇನೆಯ ಯೋಧರು ಮೃತಪಟ್ಟಿದ್ದಾರೆ ಹಾಗೂ ಅದೇ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನಾ ವರಿಷ್ಠ ಬಿಪಿನ್ ರಾವತ್ ಹೇಳಿದ್ದಾರೆ.

 ಲಷ್ಕರೆ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ನೀಲಂ ಕಣಿವೆಯಲ್ಲಿರು ವ ನಾಲ್ಕು ಭಯೋತ್ಪಾದಕ ಶಿಬಿರವನ್ನು ಭಾರತೀಯ ಸೇನೆ ಫಿರಂಗಿ ಬಳಸಿ ಧ್ವಂಸಗೊಳಿಸಿದೆ.

 ಮೂರು ಭಯೋತ್ಪಾದಕ ಶಿಬಿರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ನಾಲ್ಕನೇ ಶಿಬಿರಕ್ಕೆ ತೀವ್ರ ಹಾನಿ ಉಂಟು ಮಾಡಲಾಗಿದೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ.

ದೊಡ್ಡ ಸಂಖ್ಯೆಯ ಭಯೋತ್ಪಾದಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ಜುರಾ, ಅತ್ಮುಖಂ ಹಾಗೂ ಕುಂಡಲ್‌ಶಾಹಿ ಸಹಿತ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿರಿಸಿ ಭಾರತೀಯ ಸೇನೆ ದಾಳಿ ನಡೆಸಿತು.

 ಇಬ್ಬರು ಯೋಧರು ಹುತಾತ್ಮರಾಗಲು, ಓರ್ವ ನಾಗರಿಕ ಸಾವನ್ನಪ್ಪಲು ಹಾಗೂ ಇತರ ಮೂವರು ನಾಗರಿಕರು ಗಾಯಗೊಳ್ಳಲು ಕಾರಣವಾದ ಪಾಕಿಸ್ತಾನ ರವಿವಾರ ಮುಂಜಾನೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿದೆ.

ಈ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದ ಬಿಪಿನ್ ರಾವತ್, ತಂಗಧರ ವಲಯದ ಮೂಲಕ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ಒಳ ನುಸುಳುವಂತೆ ಮಾಡಲು ಪಾಕಿಸ್ತಾನ ಶನಿವಾರ ಸಂಜೆ ಪ್ರಯತ್ನಿಸಿತು ಎಂದರು.

ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುವ ಮೊದಲೇ, ಭಯೋತ್ಪಾದಕ ಶಿಬಿರವನ್ನು ಗುರಿಯಾಗಿರಿಸಿ ದಾಳಿ ನಡೆಸಲು ನಾವು ನಿರ್ಧರಿಸಿದ್ದೆವು. ದಾಳಿ ನಡೆಸಿ ಭಯೋತ್ಪಾದಕ ಶಿಬಿರಗಳಿಗೆ ಗಂಭೀರ ಹಾನಿ ಉಂಟು ಮಾಡಿದೆವು ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದಕರು ಮುಂಚೂಣಿ ಪ್ರದೇಶದಲ್ಲಿರುವ ಸೇನಾ ಶಿಬಿರಗಳ ಸಮೀಪ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದ್ದೆವು. ಕಳೆದ ತಿಂಗಳು ವಿವಿಧ ವಲಯಗಳಲ್ಲಿ ಮತ್ತೆ ಮತ್ತೆ ಭಯೋತ್ಪಾದಕರ ಒಳ ನುಸುಳಲು ಪ್ರಯತ್ನಿಸಿರುವುದನ್ನು ನಾವು ಗಮನಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಭಾರತದ ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗೆ ನೆರವು ನೀಡುವುದನ್ನು ಪಾಕಿಸ್ತಾನ ಸೇನೆ ಮುಂದುವರಿಸಿದಲ್ಲಿ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಲಿದೆ ಎಂದು ಬಿಪಿನ್ ರಾವತ್ ಹೇಳಿದರು.

 ಭಾರತದ ಪ್ರತಿಪಾದನೆಯನ್ನು ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ತಿರಸ್ಕರಿಸಿದ್ದಾರೆ. ಪಾಕಿಸ್ತಾನ ಓರ್ವ ಯೋಧನನ್ನು ಹಾಗೂ ಮೂವರು ನಾಗರಿಕರನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News