ನೆನಪಿನಲ್ಲಿ ಉಳಿಯುವಂತಹ ಕೃತಿಗಳನ್ನು ರಚಿಸಿ: ಚಿತ್ರ ನಿರ್ದೇಶಕ ಪಿ.ಶೇಷಾದ್ರಿ

Update: 2019-10-20 17:29 GMT

ಬೆಂಗಳೂರು, ಅ.20: ಇಂದಿನ ಯುವ ಪೀಳಿಗೆಯು ನೆನಪಿನಲ್ಲಿ ಉಳಿಯುವಂತಹ ಕೃತಿಗಳನ್ನು ರಚಿಸುವ ಅವಶ್ಯಕತೆ ಇದೆ ಎಂದು ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟಿದ್ದಾರೆ. 

ರವಿವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಟೋಟಲ್ ಕನ್ನಡ ಪ್ರಕಾಶನ ಆಯೋಜಿಸಿದ್ದ ಚಿಪ್ಪಿನಲ್ಲಿ ಮುತ್ತುಗಳು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓದುಗರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕುವ ಹಾಗೂ ನೆನಪಿನಲ್ಲಿ ಉಳಿಯುವಂತಹ ಕೃತಿಗಳನ್ನು ಯುವ ಪೀಳಿಗೆಯು ರಚಿಸಬೇಕೆಂದು ಹೇಳಿದರು. ಇಂದು ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಿಡುಗಡೆಯಾಗುತ್ತಿವೆ. ಆದರೆ, ಜನರ ನೆನಪಿನಲ್ಲಿ ಉಳಿಯುವ ಕೃತಿಗಳು ತೀರ ಕಡಿಮೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೃತಿಗಳನ್ನು ರಚನೆ ಮಾಡಲು ಆಸಕ್ತಿ, ಉತ್ಸಾಹದ ಜತೆಗೆ ಅಧ್ಯಾಯನದ ಅವಶ್ಯಕತೆಯೂ ಇದೆ. ಚಿಪ್ಪಿನಲ್ಲಿ ಮುತ್ತುಗಳು ಪುಸ್ತಕವು ಮನೋರಂಜನೆಯ ಸಾಹಿತ್ಯದ ಜತೆಗೆ ಮನೋವಿಕಾಸನದ ಪುಸ್ತಕವೂ ಆಗಿದೆ ಎಂದರು.

ಸಾಹಿತಿ ಪ್ರೊ.ಅಶ್ವಥ ನಾರಾಯಣ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಹಲವು ವಿಶೇಷ ಕೃತಿಗಳಿವೆ. ಆದರೆ, ಅನ್ಯ ಭಾಷೆಗೆ ಅನುವಾದವಾಗಿರುವುದು ಕಡಿಮೆ. ಕೆಲವು ಶೇಷ್ಠ ಸಾಹಿತಿಗಳ ಕೃತಿಗಳ ಮಾತ್ರ ಅನುವಾದವಾಗಿವೆ. ಅದರಲ್ಲೂ ಕೆಲವು ದೋಷಗಳಾಗಿವೆ ಎಂದರು.

ಲೇಖಕ ಡಾ.ರಾಘವೇಂದ್ರ ಎಫ್.ಎನ್ ಮಾತನಾಡಿ, ಎಲ್ಲರಿಗೂ ಜೀವನದಲ್ಲಿ ತಮ್ಮದೇ ಆದ ಆಸಕ್ತಿಗಳು ಇರುತ್ತವೆ. ನಾವು ಮಾಡುವ ಉದ್ಯೋಗದ ಒತ್ತಡದಲ್ಲಿ ನಮ್ಮ ಆಸಕ್ತಿಗಳನ್ನು ಕೊಲ್ಲಬಾರದು. ವೈದ್ಯಕೀಯ ಸೇವೆಯ ನಡುವೆ ಬಿಡುವಾದಾಗ ಬರೆಯುತ್ತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News