ಲೋಕಸಭೆ ಚುನಾವಣೆ ಬಳಿಕ ವಿರೋಧ ಪಕ್ಷಗಳಿಗೆ ಮೊದಲ ಅಗ್ನಿಪರೀಕ್ಷೆ

Update: 2019-10-21 04:13 GMT

ಹೊಸದಿಲ್ಲಿ, ಅ.21: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಐದು ತಿಂಗಳ ಬಳಿಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್‌ಡಿಎ) ಮತ್ತು ವಿರೋಧ ಪಕ್ಷಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳು ವಿರೋಧ ಪಕ್ಷಗಳಿಗೆ ಅಗ್ನಿಪರೀಕ್ಷೆ ಎನಿಸಿದೆ. ಫಲಿತಾಂಶ ಗುರುವಾರ ಪ್ರಕಟವಾಗಲಿದೆ. 18 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಹಾಗೂ ಎರಡು ಲೋಕಸಭಾ ಸ್ಥಾನಗಳಿಗೂ ಮತದಾನ ಆರಂಭವಾಗಿದೆ.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತು ಕಾಂಗ್ರೆಸ್-ಎನ್‌ಸಿಪಿ ಕೂಟದ ನಡುವೆ ಸ್ಪರ್ಧೆ ಇದೆ. ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಜೆಪಿಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ 1,169 ಮಂದಿ ಕಣದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ 3,237 ಹುರಿಯಾಳುಗಳಿದ್ದಾರೆ. ಹರ್ಯಾಣದ 19,578 ಮತ್ತು ಮಹಾರಾಷ್ಟ್ರದ 96,661 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಸಂಜೆ 6ರವರೆಗೆ ಮತದಾನ ಇರುತ್ತದೆ.

ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ವ್ಯಾಪಕ ಪ್ರಚಾರ ನಡೆಸಿದ್ದು, ಎರಡೂ ರಾಜ್ಯಗಳಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ. ಬಿಜೆಪಿ ಸಂವಿಧಾನದ 370ನೇ ವಿಧಿ, ಎನ್‌ಆರ್‌ಸಿ ಮತ್ತು ಸಾವರ್ಕರ್‌ಗೆ ಭಾರತರತ್ನದಂಥ ಭಾವನಾತ್ಮಕ ರಾಷ್ಟ್ರೀಯವಾದದ ಸುತ್ತವೇ ತನ್ನ ಪ್ರಚಾರತಂತ್ರ ಹೆಣೆದಿದ್ದು, ಬಹುಸಂಖ್ಯಾತ ಸಮುದಾಯಗಳ ಮತ ಧ್ರುವೀಕರಣಕ್ಕೆ ಮುಂದಾಗಿದೆ.

ವಿರೋಧ ಪಕ್ಷಗಳು ಆರ್ಥಿಕ ಹಿಂಜರಿತ, ನಿರುದ್ಯೋಗ ವಿಷಯವನ್ನು ಪ್ರಮುಖವಾಗಿ ಬಿಂಬಿಸಿವೆ. 2019ರ ಲೋಕಸಭಾ ಚುನಾವಣೆಯ ಬಳಿಕ ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್‌ ಗಾಂಧಿ ಪ್ರಚಾರಕರಾಗಿ ಆಗಮಿಸಿದ್ದಾರೆ. ಮಹಾರಾಷ್ಟ್ರದ ಕಾಂಗ್ರೆಸ್- ಎನ್‌ಸಿಪಿ ಪಾಳಯದಲ್ಲಿ ಗೆಲುವಿನ ವಿಶ್ವಾಸ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ 90 ಸದಸ್ಯ ಬಲದ ಹರ್ಯಾಣದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರ ಪತನ ಖಚಿತ ಎಂಬ ವಿಶ್ವಾಸವನ್ನು ಪಕ್ಷದ ಅಧ್ಯಕ್ಷೆ ಕುಮಾರಿ ಸೆಲ್ಜಾ ವ್ಯಕ್ತಪಡಿಸಿದ್ದಾರೆ. 370ನೇ ವಿಧಿಯ ವಿಚಾರವನ್ನು ಭಾವನಾತ್ಮಕವಾಗಿ ಪರಿವರ್ತಿಸುವ ಬಿಜೆಪಿ ಯತ್ನ ವಿಫಲವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News