ಚಿಂದಿ ಆಯುವವರಿಂದ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯ ಅತ್ಯಾಚಾರ

Update: 2019-10-21 04:02 GMT

ಹೊಸದಿಲ್ಲಿ, ಅ.21: ಬಸ್ಸಿಗಾಗಿ ಕಾಯುತ್ತಿದ್ದ ಗೋವಾದ ಮಹಿಳೆಯೊಬ್ಬರ ಮೇಲೆ ಚಿಂದಿ ಆಯುವವರು ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ ಘಟನೆ ರಾಜಧಾನಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸೆಪ್ಟಂಬರ್ 16ರಂದು ಈ ಘಟನೆ ನಡೆದಿದ್ದು, ಕಳೆದ ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ. ಶಂಕಿತರ ಗುರುತು ಪತ್ತೆಗಾಗಿ 4,000 ಪುಂಡರನ್ನು ತನಿಖೆಗೆ ಒಳಪಡಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ಚಿಂದಿ ಆಯುವವರು ಉತ್ತರಪ್ರದೇಶದ ರಾಯಬರೇಲಿಯವರು.

ದೆಹಲಿಯ ಸರಾಯ್ ಕಲೇಖಾನ್ ಬಸ್ ನಿಲ್ದಾಣದಿಂದ ಗೋವಾ ಮೂಲದ ಮಹಿಳೆ ಬಸ್ ಏರಬೇಕಿತ್ತು. ಆದರೆ ಮುಂಚಿತವಾಗಿ ನಿಲ್ದಾಣಕ್ಕೆ ಆಗಮಿಸಿದ್ದರು. ಆದ್ದರಿಂದ ಪಕ್ಕದ ಇಂದ್ರಪ್ರಸ್ಥ ಪಾರ್ಕ್ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಮಹಿಳೆ ನಿದ್ರಿಸುತ್ತಿದ್ದಾಗ ಅಬ್ದುಲ್ ಖಾಲಿದ್ ಮತ್ತು ಮುನ್ನಾ ಎಂಬ ಇಬ್ಬರು ಆರೋಪಿಗಳು ಆಕೆಯನ್ನು ಬಸ್ ನಿಲ್ದಾಣದ ಹಿಂಬದಿಯ ಪೊದೆಯ ಬಳಿ ಎಳೆದೊಯ್ದು ಅತ್ಯಾಚಾರ ಎಸಗಿದರು ಎನ್ನಲಾಗಿದೆ.

ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಮಹಿಳೆಯ ಕೂಗು ಕೇಳಿ ವಾಹನ ಚಾಲಕರೊಬ್ಬರು ವಾಹನ ನಿಲ್ಲಿಸಿದಾಗ ಅವರ ಸಹಾಯದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು. ಆರೋಪಿಗಳು ತಲೆಮರೆಸಿಕೊಂಡರು.

ಖಾಲಿದ್ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ತಾನು ಹಾಗೂ ಮುನ್ನಾ ಮದ್ಯದ ಅಮಲಿನಲ್ಲಿದ್ದೆವು ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News