ಜಾಹೀರಾತು ಹೋರ್ಡಿಂಗ್ ಮೂಲಕ ವಿದ್ಯುತ್‍ ಸ್ಪರ್ಶ: 13 ವರ್ಷದ ಬಾಲಕ ಮೃತ್ಯು

Update: 2019-10-21 10:11 GMT
Photo: thenewsminute.com

ಕುಡಲೂರು (ತಮಿಳುನಾಡು), ಅ.21: ಹಿಂದೆ ನಡೆದ ಅಪಘಾತಗಳ ಘಟನೆ ಮತ್ತು ನ್ಯಾಯಾಲಯ ಆದೇಶದ ಹೊರತಾಗಿಯೂ, ತಮಿಳುನಾಡಿನಲ್ಲಿ ವಿವಿಧ ಗಾತ್ರಗಳ ಬ್ಯಾನರ್ ಮತ್ತು ಜಾಹೀರಾತು ಫಲಕಗಳ ಹಾವಳಿ ವ್ಯಾಪಕವಾಗಿದೆ. ಈ ಬಾರಿ ಕುಡುಲೂರಿನಲ್ಲಿ ಬ್ಯಾಂಕಿನ ಜಾಹೀರಾತು ಫಲಕವೊಂದರ ಮೂಲಕ ವಿದ್ಯುತ್ ಸ್ಪರ್ಶವಾಗಿ 13 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಬಾಲಕ ಆತನ ಹೆತ್ತವರಿಗೆ ಏಕೈಕ ಪುತ್ರ.

ದಿನೇಶ್ ಕುಮಾರ್ ಎಂಬ ಒಂಬತ್ತನೇ ತರಗತಿ ಬಾಲಕ ಸುಮಾರು ಮೂರು ಕಿಲೋಮೀಟರ್ ದೂರದ ಅಂಬಲವಣನ್‍ ಪೆಟ್ಟಿ ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತನ್ನ ಮನೆಗೆ ವಾಪಾಸು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಶುಕ್ರವಾರ ತೀವ್ರ ಜ್ವರ ಇದ್ದ ಕಾರಣ ಬಾಲಕ ಆಸ್ಪತ್ರೆಗೆ ಹೋಗಿದ್ದ. ಸೈಕಲ್‍ ನಲ್ಲಿ ಬರುತ್ತಿದ್ದ ಬಾಲಕ ಎದುರಿನಿಂದ ಬಂದ ವಾಹನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಸ್ತೆ ಬದಿಗೆ ಬಂದಿದ್ದ. ವಾಹನ ಹಾದು ಹೋಗುವ ಸಂದರ್ಭದಲ್ಲಿ ಸಮತೋಲನ ಕಳೆದುಕೊಂಡ ಬಾಲಕ ಜಾಹೀರಾತು ಫಲಕದ ಕಂಬ ಸ್ಪರ್ಶಿಸಿದ ಎಂದು ಪೊಲೀಸರು ಹೇಳಿದ್ದಾರೆ.

ಎರಡು ಅಡಿ ಗಾತ್ರದ ಪುಟ್ಟ ಜಾಹೀರಾತು ಫಲಕ ಅದಾಗಿದ್ದು, ಹೋರ್ಡಿಂಗ್ ಅಳವಡಿಸಿದ್ದ ಬಲ್ಬ್ ಸಂಪರ್ಕ ಕಡಿತಗೊಂಡು ಕಂಬಕ್ಕೆ ವಿದ್ಯುತ್ ಸಂಚಾರವಾಗುತ್ತಿತ್ತು. ಸಮತೋಲನ ಸಾಧಿಸುವ ಸಲುವಾಗಿ ಬಾಲಕ ಕಂಬ ಹಿಡಿದಿದ್ದಾನೆ. ಮಳೆ ಕಾರಣದಿಂದ ಒದ್ದೆ ನೆಲದಲ್ಲಿ ಆತನಿಗೆ ವಿದ್ಯುತ್‍ ಸ್ಪರ್ಶವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News