ಆರೆಸ್ಸೆಸ್ ಮುಖಂಡರ ಭೇಟಿ: ಸ್ಪಷ್ಟನೆ ನೀಡಿದ 'ನೆಟ್‍ಫ್ಲಿಕ್ಸ್'

Update: 2019-10-21 10:26 GMT

ಮುಂಬೈ, ಅ.21: 'ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ' ಅಂಶಗಳನ್ನು ನಿರ್ಬಂಧಿಸುವಂತೆ ಒತ್ತಾಯಿಸುವ ಸಲುವಾಗಿ ಆರೆಸ್ಸೆಸ್ ನ ಹಿರಿಯ ಮುಖಂಡರು ತನ್ನನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳನ್ನು 'ನೆಟ್‍ ಫ್ಲಿಕ್ಸ್ ಇಂಟರ್ ನ್ಯಾಷನಲ್ ಒರಿಜಿನಲ್ಸ್‍' ಮುಖ್ಯಸ್ಥ ಸೃಷ್ಟಿ ಬೆಲ್ಹ್ ಆರ್ಯ ಅಲ್ಲಗಳೆದಿದ್ದಾರೆ.

'ಎಕನಾಮಿಕ್ ಟೈಮ್ಸ್' ವರದಿಯ ಪ್ರಕಾರ, ಆರೆಸ್ಸೆಸ್ ಪ್ರತಿನಿಧಿಗಳು ಕಳೆದ ನಾಲ್ಕು ತಿಂಗಳಲ್ಲಿ ಹೊಸದಿಲ್ಲಿ ಮತ್ತು ಮುಂಬೈನಲ್ಲಿ ನೆಟ್‍ ಫ್ಲಿಕ್ಸ್ ಅಧಿಕಾರಿಗಳ ಜತೆ ಇಂತಹ ಆರು ಅನೌಪಚಾರಿಕ ಸಭೆಗಳನ್ನು ನಡೆಸಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವನ್ನು ಟೀಕಿಸದಂತೆಯೂ ಆರೆಸ್ಸೆಸ್ ಮುಖಂಡರು ಬಯಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಜತೆಗೆ ಹಿಂದೂ ಸಂಕೇತ ಮತ್ತು ಭಾರತೀಯ ಸೇನೆಯ ಬಗ್ಗೆ ಮಾನಹಾನಿಕರ ಅಂಶಗಳನ್ನು ಪ್ರದರ್ಶನದಲ್ಲಿ ಸೇರಿಸದಂತೆಯೂ ತಾಕೀತು ಮಾಡಿದ್ದಾರೆ ಎಂದು ವರದಿ ವಿವರಿಸಿದೆ.

"ಕಲಾತ್ಮಕ ಸ್ವಾತಂತ್ರ್ಯ: ಮನೋರಂಜನಾ ಕಾರ್ಯಕ್ರಮಗಳ ನಕ್ಷೆ ಸಿದ್ಧಪಡಿಸುವಿಕೆ" ಎಂಬ ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸೃಷ್ಟಿ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗಿತ್ತು. "ಇದು ನಿಜವಾದ ಸುದ್ದಿಯಲ್ಲ; ಅಂಥ ಯಾವುದೇ ಸಭೆಗಳು ನಡೆದಿಲ್ಲ. ಅದು ಸುಳ್ಳು ಸುದ್ದಿ" ಎಂದು ಅವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News