ಹುಬ್ಬಳಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ: ಇಬ್ಬರಿಗೆ ಗಾಯ

Update: 2019-10-21 14:22 GMT

ಹುಬ್ಬಳ್ಳಿ, ಅ.21: ನಗರದ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಹುಬ್ಬಳ್ಳಿಯ ಅರಳಿಕಟ್ಟಿ ನಿವಾಸಿ ಹುಸೇನ್ ಎನ್.(23), ನಾಲ್ಕು ವರ್ಷದ ಮಗುವೊಂದು ಗಾಯಗೊಂಡಿದೆ. ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಏನಿದು ಘಟನೆ?: ಸೋಮವಾರ ಮಧ್ಯಾಹ್ಯ 12 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣದ ವಿಜಯವಾಡ-ಹುಬ್ಬಳ್ಳಿ-ಅಮರಾವತಿ ಮಾರ್ಗದ ರೈಲಿನಲ್ಲಿ ಅನುಮಾನಾಸ್ಪದವಾಗಿ ರಟ್ಟಿನ ಪೆಟ್ಟಿಗೆಯೊಂದು ಕಂಡಿದೆ. ಇದನ್ನು ಹಿಡಿದು ಅಧಿಕಾರಿಗಳಿಗೆ ತೋರಿಸಲು ವ್ಯಾಪಾರಿ ಹುಸೇನ್ ಮಕಾನವಾಲೆ ಪ್ಲಾಟ್ ಫಾರಂ 1ಕ್ಕೆ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಬಾಕ್ಸ್‌ನಲ್ಲಿದ್ದ ಟಿಫನ್ ಡಬ್ಬ ತೆರೆಯುತ್ತಿದ್ದಂತೆ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

ಸ್ಫೋಟದಿಂದ ಪ್ಲಾಟ್ ಫಾರಂನಲ್ಲಿರುವ ಗಾಜು ಪುಡಿ ಪುಡಿಯಾಗಿದ್ದು, ಹುಸೇನ್ ಅವರು ಕೈಗೂ ಗಂಭೀರ ಗಾಯವಾಗಿದೆ. ಹತ್ತಿರದಲ್ಲಿದ್ದ ಮಗುವಿಗೂ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೇ ಪೊಲೀಸರು, ಶ್ವಾನದಳದ ಜೊತೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ರೈಲ್ವೇ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಫೋಟಕಕ್ಕೆ ಬಳಸಿದ ವಸ್ತುವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ 10ಕ್ಕೂ ಹೆಚ್ಚು ಪೆಟ್ಟಿಗೆಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇದನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಯಲು ಪ್ರದೇಶಕ್ಕೆ ಸಾಗಿಸಿ ತಪಾಸಣೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೂ ಸಂಬಂಧ?

ಪೆಟ್ಟಿಗೆಯನ್ನು ತೆರೆದು ನೋಡಿದಾಗ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷದ ಹೆಸರನ್ನು ಕೆಂಪು ಅಕ್ಷರದಲ್ಲಿ ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಕೊಲ್ಲಾಪುರ ವಿಧಾನಸಭಾ ಕ್ಷೇತ್ರದ ಪ್ರಾದೇಶಿಕ ಪಕ್ಷಕ್ಕೆ ಸೇರಿದ ಅಭ್ಯರ್ಥಿಯೋರ್ವನ ಹೆಸರು ಉಲ್ಲೇಖಿಸಿದ್ದು, ಈ ಸ್ಫೋಟ ಪ್ರಕರಣಕ್ಕೂ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಗೂ ಸಂಬಂಧ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.

‘ರಾಜ್ಯದಲ್ಲಿ ಕಟ್ಟೆಚ್ಚರ’

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯವ್ಯಾಪ್ತಿ ಕಟ್ಟೆಚ್ಚರ ವಹಿಸಲು ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News