ಪ್ರಜಾಪ್ರಭುತ್ವ ಕಾಪಾಡದಿದ್ದರೆ ಮೋದಿ ಪ್ರಧಾನಿಯಾಗಲು ಸಾಧ್ಯವಿರಲಿಲ್ಲ: ದಿನೇಶ್ ಗುಂಡೂರಾವ್

Update: 2019-10-21 12:34 GMT

ಬೆಂಗಳೂರು, ಅ. 21: ಕಾಂಗ್ರೆಸ್ ಪಕ್ಷ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡದೆ ಇದ್ದಿದ್ದರೆ, ಮೋದಿಯವರು ಈ ದೇಶದ ಪ್ರಧಾನಿಯಾಗಲು ಸಾಧ್ಯವೇ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 150ನೆ ಜನ್ಮ ದಿನಾಚರಣೆ ನೆನಪಿನೊಂದಿಗೆ ಅವರ ಆದರ್ಶ ಪಾಲಿಸುವ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸುವ ಪ್ರೇರಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವಲ್ಲದೆ, ಹಿಂದೂ ಮಹಾಸಭಾ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದಿದ್ದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತಿರಲಿಲ್ಲ ಎಂದು ಹೇಳಿದರು.

ಸರ್ವಾಧಿಕಾರಿ ಧೋರಣೆಯುಳ್ಳ ಆರೆಸೆಸ್ಸ್ ಮತ್ತು ಹಿಂದೂ ಮಹಾಸಭಾ ನಾಯಕರು ದೇಶವನ್ನು ಬೇರೆಯ ಹಾದಿಗೆ ಕೊಂಡೊಯ್ಯುತ್ತಿದ್ದರು. ಅಖಂಡತೆ, ಸೌಹಾರ್ದತೆ ನಾಶವಾಗುತ್ತಿತ್ತು. ಮೋದಿ ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರತಿಪಾದಿಸಿದರು.

ಈಗಿನ ಯುವಜನರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಜವಾಹರ್ ಲಾಲ್ ನೆಹರೂ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳಿವೆ. ಅವರಿಬ್ಬರೂ ಇಲ್ಲದೆ ಇದ್ದರೆ ಶ್ರೀಲಂಕಾ, ಪಾಕಿಸ್ತಾನ ಭಾರತದಲ್ಲೇ ಇರುತ್ತಿದ್ದವು. ವಿಶಾಲ ಭಾರತ ನಮ್ಮದಾಗಿರುತ್ತಿತ್ತು ಎಂದು ಹಗುರವಾಗಿ ಮಾತನಾಡುತ್ತಾರೆ. ನಾನಾ ದೇಶಗಳನ್ನು ಒಗ್ಗೂಡಿಸಿ ಆ ಸಂದರ್ಭದಲ್ಲಿ ಭಾರತ ರಚನೆಯಾಗಿದೆ. ಈಗ ಮಾತನಾಡುವುದು ಸುಲಭ. ಕಟ್ಟುವ ಹಂತದಲ್ಲಿ ಎಲ್ಲವೂ ಕಷ್ಟ. ಕಾಂಗ್ರೆಸ್ ಕಟ್ಟಿದ ಭಾರತದಲ್ಲೇ ಮೋದಿ ಪ್ರಧಾನಿಯಾಗಿದ್ದಾರೆ. ಆದರೂ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದ ಅವರು, ಗಾಂಧೀಜಿಯವರ ಹೋರಾಟದ ನೈತಿಕ ಶಕ್ತಿ ನಮಗೆ ಪ್ರೇರಣೆಯಾಗಬೇಕು ಎಂದರು.

ಸಾವರ್ಕರ್‌ಗೆ ಭಾರತರತ್ನ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಮಹಾತ್ಮ ಗಾಂಧಿಜೀಯವರನ್ನು ಹತ್ಯೆಗೈದ ಗೋಡ್ಸೆಗೂ ಭಾರತರತ್ನ ಕೊಡಬಹುದು ಎಂಬ ಅರ್ಥದಲ್ಲಿ ಸಚಿವರೊಬ್ಬರು ಮಾತನಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News