ಸಾಮಾಜಿಕ ಜಾಲತಾಣಗಳ ನಿರ್ಬಂಧಕ್ಕೆ ಸರ್ಕಾರ ಚಿಂತನೆ

Update: 2019-10-22 03:50 GMT

ಹೊಸದಿಲ್ಲಿ, ಅ.22: ಭಾರತದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸುಪ್ರೀಂಕೋರ್ಟ್‌ಗೆ ಸೋಮವಾರ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳು ಪ್ರಜಾಪ್ರಭುತ್ವಕ್ಕೆ ಕಲ್ಪನೆಗೂ ನಿಲುಕದ ಹಾನಿ ಮಾಡುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ಕುರಿತ ನೀತಿ ನಿಮಯ ರೂಪಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ಅಗತ್ಯ, ಟ್ವಿಟರ್, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. "ವೈಯಕ್ತಿಕ ಹಕ್ಕು ಮತ್ತು ದೇಶದ ಭದ್ರತೆ, ಸಮಗ್ರತೆ ಮತ್ತು ಭದ್ರತೆಗೆ ಎದುರಾಗುವ ಅಪಾಯವನ್ನು ತಡೆಯುವಲ್ಲಿ ಈ ನಿಯಮಾವಳಿ ಸಹಕಾರಿಯಾಗಲಿದೆ" ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಕ್ತಾರರೊಬ್ಬರು ಈ ದಾಖಲೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚುತ್ತಿರುವ ಸುಳ್ಳು ಮಾಹಿತಿಗಳನ್ನು ಹರಡುವುದು ನಿರ್ಬಂಧಿಸುವ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ. ವಿವಾದಾತ್ಮಕ ಸುಳ್ಳು ಸುದ್ದಿ ನಿರ್ಬಂಧ ಕಾನೂನು ಸಿಂಗಾಪುರದಲ್ಲಿ ಈ ತಿಂಗಳು ಜಾರಿಗೆ ಬಂದಿದೆ. ಕೇಂದ್ರ ಸರಕಾರ ಕೂಡಾ ಆನ್‌ಲೈನ್ ಅಪರಾಧ ತಡೆಗೆ ಮತ್ತು ಸುಳ್ಳು ಸುದ್ದಿಗಳ ವಿರುದ್ಧದ ಸಮರಕ್ಕೆ ಮುಂದಾಗಿದೆ. ಆದರೆ ಸರ್ಕಾರದ ಈ ಕ್ರಮ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಸಾಧ್ಯತೆಯಿದ್ದು, ಬಳಕೆದಾರರ ಖಾಸಗಿತನದ ಹಕ್ಕಿನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಒಂದು ವರ್ಗ ವಿಶ್ಲೇಷಿಸುತ್ತಿದೆ.

ವಾಟ್ಸ್ ಆ್ಯಪ್ ಅಥವಾ ಇತರ ಮೆಸೇಜಿಂಗ್ ಸೇವೆ ಒದಗಿಸುವ ಕಂಪನಿಗಳು ಹಾಗೂ ಸಾಮಾಜಿಕ ಜಾಲತಾಣ ಕಂಪನಿಗಳು, ಸಂದೇಶದ ಮೂಲವನ್ನು ಗುರುತಿಸಿ ಬಹಿರಂಗಪಡಿಸುವುದನ್ನು ಕಡ್ಡಾಯಪಡಿಸಬಹುದೇ ಎಂಬ ಬಗ್ಗೆ ವಾಟ್ಸ್ ಆ್ಯಪ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News