ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್ ಸೇವೆ: ಹೆರಿಗೆ ಬಳಿಕ ಮಗು ಜೊತೆ ನಟಿ ಮೃತ್ಯು

Update: 2019-10-22 05:02 GMT

ಮುಂಬೈ, ಅ.22: ಸಕಾಲಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದೇ ಮರಾಠಿ ಚಿತ್ರನಟಿ ಪೂಜಾ ಝುಂಜರ್ ಹಾಗೂ ನವಜಾತ ಶಿಶು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ.

ಸಕಾಲಕ್ಕೆ ಆ್ಯಂಬುಲೆನ್ಸ್ ಸಿಕ್ಕಿದ್ದರೆ ತಾಯಿ- ಮಗು ಉಳಿಯುತ್ತಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ರವಿವಾರ ಅಂದರೆ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನಾ ದಿನ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ಈ ಘಟನೆ ಆ ಪ್ರತಿಪಾದನೆಯನ್ನು ಅಣಕಿಸುವಂತಿದೆ.

ಅಕ್ಟೋಬರ್ 20ರಂದು ಬೆಳಗ್ಗೆ 6:30ರ ಸುಮಾರಿಗೆ ಮರಾಠಾವಾಡ ಪ್ರದೇಶದ ಹಿಂಗೋಲಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರವಿವಾರ ನಸುಕಿನ 2 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಹುಟ್ಟೂರು ಗೋರೆಗಾಂವ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂಜಾ ಅವರನ್ನು ಕರೆದೊಯ್ಯಲಾಗಿತ್ತು. ಪೂಜಾ ಮಗುವಿಗೆ ಜನ್ಮ ನೀಡಿದರೂ, ಅಲ್ಪಕಾಲದಲ್ಲೇ ಶಿಶು ಮರಣ ಹೊಂದಿತು. ಪೂಜಾ ದೇಹಸ್ಥಿತಿ ಕೂಡಾ ಕ್ಷೀಣಿಸಿತು ಎಂದು ಪೊಲೀಸರು ವಿವರಿಸಿದ್ದಾರೆ.

ಗೋರೆಗಾಂವ್‌ನಿಂದ ಸುಮಾರು 40 ಕಿಲೋಮೀಟರ್ ದೂರದ ಹಿಂಗೋಲಿ ಸಿವಿಲ್ ಆಸ್ಪತ್ರೆಗೆ ಪೂಜಾ ಅವರನ್ನು ಕರೆದೊಯ್ಯುವಂತೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ಮಾಡಿದರು. ಆದರೆ ಆ್ಯಂಬುಲೆನ್ಸ್ ಇಲ್ಲದ ಕಾರಣ ಸಾಧ್ಯವಾಗಲಿಲ್ಲ. ಅಂತಿಮವಾಗಿ ಖಾಸಗಿ ಆ್ಯಂಬುಲೆನ್ಸ್ ಬಾಡಿಗೆಗೆ ಪಡೆದು ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ನಟಿ ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News