27ನೆ ವರ್ಷಕ್ಕೇ ಬ್ರಿಟಿಷ್ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಷ್ಫಾಖುಲ್ಲಾ ಖಾನ್

Update: 2019-10-22 11:46 GMT
ಅಷ್ಫಾಖುಲ್ಲಾ ಖಾನ್ (Photo: wikipedia)

ಹೊಸದಿಲ್ಲಿ: ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣ ಹೊಂದಿಸುವ ಸಲುವಾಗಿ ಕಕೋರಿಯಿಂದ ಲಕ್ನೋಗೆ ಬ್ರಿಟಿಷರ  ತಿಜೋರಿಯನ್ನು ಹೊತ್ತೊಯ್ದು ಸಾಗುತ್ತಿದ್ದ ರೈಲನ್ನು 1925ರಲ್ಲಿ ಕ್ರಾಂತಿಕಾರಿ ಸಂಘಟನೆ ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್ ನಾಯಕ ರಾಮ್ ಪ್ರಸಾದ್ ಬಿಸ್ಮಿಲ್ ಜತೆಗೆ ದರೋಡೆಗೈದಿದ್ದಕ್ಕೆ ಅಷ್ಫಾಖುಲ್ಲಾ ಖಾನ್ ಇತಿಹಾಸದ ಪುಟ ಸೇರಿದ್ದಾರೆ. ಖಾನ್, ಬಿಸ್ಮಿಲ್ ಹಾಗೂ ಒಂಬತ್ತು ಮಂದಿ ಇತರರನ್ನು ನಂತರ ಬ್ರಿಟಿಷ್ ಸೈನಿಕರು ಸೆರೆ ಹಿಡಿದು ಗಲ್ಲಿಗೇರಿಸಿದ್ದರು.

ಕಾವ್ಯ ಮತ್ತು ದೇಶಭಕ್ತಿ

ಅಕ್ಟೋಬರ್ 22, 1900ರಂದು ಉತ್ತರ ಪ್ರದೇಶದ ಶಾಹಜಾನಪುರದಲ್ಲಿ ಜನಿಸಿದ ಅಷ್ಫಾಖುಲ್ಲಾ ಖಾನ್ ತಂದೆ ಪಠಾನರಾಗಿದ್ದರೆ ಅವರ ತಾಯಿ ಕುಟುಂಬದವರು ವಸಾಹತುಶಾಹಿ ಭಾರತದಲ್ಲಿ ಆಡಳಿತಾತ್ಮಕ ಸೇವೆಯಲ್ಲಿದ್ದವರು.

ಸಣ್ಣ ಪ್ರಾಯದಿಂದಲೇ ಉರ್ದು ಕಾವ್ಯದಲ್ಲಿ ಆಸಕ್ತಿ ಹೊಂದಿದ್ದ ಖಾನ್ ವರಸಿ ಹಾಗೂ ಹಝರತ್ ಎಂಬ ಕಾವ್ಯನಾಮಗಳಿಂದ ಕವನಗಳನ್ನು ಬರೆಯುತ್ತಿದ್ದರು. ಭಾರತದಲ್ಲಿ ಬ್ರಿಟಿಷರ 'ಸಂಚಿನ' ಬಗ್ಗೆ "ಫೂಟ್ ಡಾಲ್ಕರ್ ಶಾಸನ್ ಕರ್ನೆ ಕಿ ಚಾಲ್ ಕ ಹಮ್ ಪರ್ ಕೋಯಿ ಅಸರ್ ನಹೀ ಹೋಗಾ ಔರ್ ಹಿಂದುಸ್ತಾನ್ ಆಜಾದ್ ಹೋಕರ್ ರಹೇಗ'' (ಭಾರತವನ್ನು ಒಡೆದು ಆಳುವ ನಿಮ್ಮ ಸಂಚು ಕೆಲಸ ಮಾಡದು, ಹಿಂದುಸ್ತಾನವನ್ನು ನಾವು ನಮ್ಮದಾಗಿಸುತ್ತೇವೆ,'' ಎಂಬ ಕವನ ಬರೆದಿದ್ದರು.

ಮುಂದೆ ಖಾನ್ ತಮ್ಮ ಹಿರಿಯ ಸೋದರನಿಂದ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಶೌರ್ಯ ಹಾಗೂ ಉರ್ದು ಕವನಗಳ ಬಗ್ಗೆ ತಿಳಿದುಕೊಂಡಿದ್ದರು.

1922ರಲ್ಲಿ ಚೌರಿ ಚೌರಾ ಘಟನೆಯಿಂದ ಗಾಂಧೀಜಿ ಅಸಹಕಾರ ಚಳುವಳಿಯನ್ನು ಅಂತ್ಯಗೊಳಿಸಿದಾಗ ಹಲವು ಯುವಕರಂತೆ ಖಾನ್ ಕೂಡ ನಿರಾಸೆಗೊಂಡಿದ್ದರು. ಅಹಿಂಸಾತ್ಮಕ ಮಾರ್ಗಗಳಲ್ಲಿ ನಂಬಿಕೆ ಕಳೆದುಕೊಳ್ಳಲಾರಂಭಿಸಿದ ಅವರು ವಸಾಹತುಶಾಹಿಗಳಿಂದ ಸ್ವಾತಂತ್ರ್ಯ ಪಡೆಯಲು ತೀವ್ರಗಾಮಿ ಕ್ರಮಗಳ ಮುಲಕ ಮುಂದಡಿಯಿಡಲು ನಿರ್ಧರಿಸಿದ್ದರು.

ಗಾಂಧೀಜಿಯ ಚಿಂತನೆಗೆ ವ್ಯತಿರಿಕ್ತವಾದ ಚಿಂತನೆ ಹೊಂದಿದ್ದ ಖಾನ್ ಇದರಿಂದಾಗಿಯೇ ಮುಂದೆ ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇನ್ ಸೇರಿದ್ದರೆಂಬುದು ದೂರದರ್ಶನ ಸಾಕ್ಷ್ಯಚಿತ್ರವೊಂದರಿಂದ ಸ್ಪಷ್ಟವಾಗುತ್ತದೆ.

ಬಿಸ್ಮಿಲ್ ಆರಂಭದಲ್ಲಿ ಶ್ರೀಮಂತ ಕುಟುಂಬಕ್ಕೆ ಸೇರಿದ ಖಾನ್ ನನ್ನು ತನ್ನ ಸಂಘಟನೆಗೆ ಸೇರಿಸಿಕೊಳ್ಳಲು ಹಿಂಜರಿದಿದ್ದರು. ಶಾಹಜಾನಪುರದ ಇತರ ಪಠಾನರಂತೆ ಖಾನ್ ತಂದೆ ಕೋತ್ವಾಲ್ ಆಗಿದ್ದರು. ಆದರೆ ಇಬ್ಬರೂ ಸಮಾನ ಚಿಂತನೆಗಳನ್ನು ಹೊಂದಿದ್ದರಿಂದ ಸ್ನೇಹಿತರಾಗಿದ್ದರು. ಇಬ್ಬರೂ ಸಂಘಟನೆಯಲ್ಲಿ ಸಕ್ರಿಯರಾದಾಗ ಹೋರಾಟಕ್ಕೆ ಶಸ್ತ್ರ ಖರೀದಿಸಿಲು ಹಣ ಬೇಕೆಂಬ ಕಾರಣದಿಂದ ಅವರು ಆಗಸ್ಟ್ 9, 1925ರಂದು ಕಕೋರಿ ರೈಲು ದರೋಡೆ ನಡೆಸಿದ್ದರು. ಆದರೆ ಪ್ರಯಾಣಿಕರನ್ನು ಲೂಟುವ ಸಂದರ್ಭ ಓರ್ವರು ದುರದೃಷ್ಟವಶಾತ್ ಮೃತಪಟ್ಟಿದ್ದರು.

ಬ್ರಿಟಿಷ್ ಸೇನೆ ಇಬ್ಬರಿಗೂ ಉಗ್ರರೆಂದು ಹಣೆಪಟ್ಟಿ ಕಟ್ಟಿ ಅವರನ್ನು ಸೆರೆ ಹಿಡಿದಿತ್ತು. ಫೈಝಾಬಾದ್‍ನ ಕಾರಾಗೃಹದಲ್ಲಿ ಖಾನ್ ರನ್ನು ಅವರು 27 ವರ್ಷದವನಾಗಿರುವಾಗ ಗಲ್ಲಿಗೇರಿಸಲಾಯಿತು. ಇಷ್ಟೊಂದು ಸಣ್ಣ ಪ್ರಾಯದಲ್ಲಿ ಗಲ್ಲಿಗೇರಿಸಲ್ಪಟ್ಟ ನಾಲ್ಕು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರು ಒಬ್ಬರಾಗಿದ್ದರು. ಶಾಹಜಾನಪುರದಲ್ಲಿ ಅವರ ಸಮಾಧಿಯಿದೆ.

ಗಲ್ಲಿಗೇರಿಸಲ್ಪಟಡುವ ಮೂರು ದಿನಗಳ ಹಿಂದೆ ಅವರು ಆಗಿನ ರಾಜಕೀಯ ಬೆಳವಣಿಗೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರಿಗೆ ಬಹಿರಂಗ ಪತ್ರ ಬರೆದಿದ್ದರು ಎಂದು ಇತಿಹಾಸಕಾರ ಎಸ್ ಇರ್ಫಾನ್ ಹಬೀಬ್ ವಿವರಿಸುತ್ತಾರೆ.

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಖಾನ್ ಮಾಡಿದ ತ್ಯಾಗ ಬಲಿದಾನಗಳನ್ನು ಸರಿಯಾಗಿ ಸ್ಮರಿಸಲಾಗುತ್ತಿಲ್ಲ ಎಂದು ಖಾನ್ ಮೊಮ್ಮಗ ಶಾಹದಬ್ದುಲ್ಲಾ ಖೇದ ವ್ಯಕ್ತಪಡಿಸುತ್ತಾರೆ. ಖಾನ್ ರನ್ನು ಗಲ್ಲಿಗೇರಿಸಿದ ನಂತರ ಕುಟುಂಬದ ಎಲ್ಲಾ ಆಸ್ತಿಯನ್ನು ಬ್ರಿಟಿಷ್ ಸರಕಾರ ವಶಪಡಿಸಿಕೊಂಡಿತ್ತು. "ಆದರೆ ನಮ್ಮ ಅಜ್ಜಿ ಶ್ರೀಮಂತ ಕುಟುಂಬದವರಾಗಿದ್ದರಿಂದ ನಾವು ಬದುಕುಳಿದೆವು. ಆಗಸ್ಟ್ 15 ಹಾಗೂ ಖಾನ್  ಪುಣ್ಯಥಿತಿಯಂದು ಹೊರತು ಪಡಿಸಿ ಅವರ ಹೋರಾಟವನ್ನು ಯಾರೂ ಸ್ಮರಿಸುವುದಿಲ್ಲ ಎಂದು ಶಾಹದಬ್ದುಲ್ಲಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News