ಗುಂಪು ಹತ್ಯೆ ಕುರಿತ ಅಂಕಿಅಂಶ ಹೊರಗಿಟ್ಟ ಎನ್‌ಸಿಆರ್‌ಬಿ!

Update: 2019-10-22 08:02 GMT

 ಹೊಸದಿಲ್ಲಿ, ಅ.22: ಎರಡು ವರ್ಷಗಳ ತಡವಾಗಿ ಸೋಮವಾರ ಬಿಡುಗಡೆಯಾಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ(ಎನ್‌ಸಿಆರ್‌ಬಿ)2017ರ ಭಾರತದ ಅಪರಾಧ ವರದಿಯಲ್ಲಿ ಗುಂಪು ಹತ್ಯೆ ಕುರಿತ ಅಂಕಿ-ಅಂಶವನ್ನು ಹೊರಗಿಡಲಾಗಿದೆ.

ಹೊಸದಾಗಿ ಸೇರ್ಪಡೆಯಾಗಿರುವ ವಿಭಾಗಗಳಾದ ಖಾಪ್ ಪಂಚಾಯತ್‌ಗಳಿಂದ ಹತ್ಯೆ, ಧಾರ್ಮಿಕ ಕಾರಣಗಳಿಗಾಗಿ ಹತ್ಯೆ, ಪ್ರಭಾವಿ ವ್ಯಕ್ತಿಗಳಿಂದ ಹತ್ಯೆ ಹಾಗೂ ಗುಂಪು ಹತ್ಯೆಗೆ ಸಂಬಂಧಿಸಿದ ಅಂಕಿ-ಅಂಶವನ್ನು ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಪ್ರಕಟಿಸಿಲ್ಲ.

2015-16ರಲ್ಲಿ ಗುಂಪು ಹತ್ಯೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಹೆಚ್ಚಳವಾದ ಬಳಿಕ ಗುಂಪು ಹತ್ಯೆ ಕುರಿತ ಅಂಕಿ-ಅಂಶವನ್ನು ಎನ್‌ಸಿಆರ್‌ಬಿಯಲ್ಲಿ ಸೇರ್ಪಡೆಗೊಳಿಸಲು ಯೋಜನೆ ರೂಪಿಸಲಾಗಿತ್ತು.

‘‘ಗುಂಪು ಹತ್ಯೆ ಕುರಿತ ಅಂಕಿ-ಅಂಶ ಪ್ರಕಟಿಸದೇ ಇರುವುದು ಅಚ್ಚರಿ ತಂದಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಡಾಟಾಗಳು ಸಿದ್ದವಾಗಿದ್ದವು. ಸಂಪೂರ್ಣವಾಗಿ ಪರಿಶೀಲಿಸಲಾಗಿತ್ತು. ಇದನ್ನು ಏಕೆ ಪ್ರಕಟಿಸಿಲ್ಲ ಎನ್ನುವುದು ಉನ್ನತಾಧಿಕಾರಿಗಳಿಗೆ ಮಾತ್ರ ಗೊತ್ತಿದೆ’’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಜಿ ಎನ್‌ಸಿಆರ್‌ಬಿ ನಿರ್ದೇಶಕ ಇಶ್ ಕುಮಾರ್ ನೇತೃತ್ವದಲ್ಲಿ ನಡೆದ ಬೃಹತ್ ಮಟ್ಟದ ದತ್ತಾಂಶ ನವೀಕರಿಸುವ ಕಾರ್ಯಕ್ರಮದಲ್ಲಿ ಗುಂಪುಹತ್ಯೆಯಂತಹ ವಿಭಾಗಗಳು ಒಳಗೊಂಡಿದ್ದವು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News