ಸಾವರ್ಕರ್ ಭಾರತ ರತ್ನ ಅಲ್ಲ, ಹಿಂದುತ್ವ ರತ್ನ: ಪ್ರಧಾನಿಗೆ ಸುಧೀಂದ್ರ ಕುಲಕರ್ಣಿ

Update: 2019-10-22 09:30 GMT

ಹೊಸದಿಲ್ಲಿ: ಬಿಜೆಪಿ ತನ್ನ ಮಹಾರಾಷ್ಟ್ರ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದರೂ ಹಿಂದುತ್ವ ನಾಯಕ ದಿವಂಗತ ವಿನಾಯಕ್ ದಾಮೋದರ್ ಸಾವರ್ಕರ್  ಅವರು ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ಮರಣೋತ್ತರ ಪಡೆಯಲು ಏಕೆ ಅರ್ಹರಲ್ಲ ಎಂಬುದಕ್ಕೆ ಸರಣಿ ಟ್ವೀಟ್ ಗಳ ಮುಖಾಂತರ ಮಾಜಿ ಪ್ರಧಾನಿ ವಾಜಪೇಯಿ ಅವರ ಭಾಷಣಗಳ ಬರಹಗಾರರಾಗಿರುವ ಸುಧೀಂದ್ರ ಕುಲಕರ್ಣಿ ವಿವರಣೆ ನೀಡಿದ್ದಾರೆ.

ಸಾವರ್ಕರ್ ಅವರನ್ನು ಹಿಂದುತ್ವ ರತ್ನ ಎಂದು ಕರೆಯಬಹುದು ಎಂದು ತಮ್ಮ ಮೊದಲ ಟ್ವೀಟ್ ನಲ್ಲಿ ಹೇಳಿರುವ ಕುಲಕರ್ಣಿ  "ಆದರೆ ಅವರು ಭಾರತ ರತ್ನಕ್ಕೆ ಖಂಡಿತವಾಗಿಯೂ ಅನರ್ಹರು. ಅವರೊಬ್ಬ ದೇಶಭಕ್ತರಾಗಿದ್ದರು ಆದರೆ ಭಾಗಶಃ ದೇಶಭಕ್ತರಾಗಿದ್ದರು. ಇಷ್ಟೊಂದು ಮುಸ್ಲಿಂ ವಿರೋಧಿ ಭಾವನೆಗಳೊಂದಿಗೆ ಯಾರೂ ಅಪ್ಪಟ ಭಾರತೀಯನಾಗಲು ಸಾಧ್ಯವಿಲ್ಲ,'' ಎಂದು ಬರೆದಿದ್ದಾರೆ.

"ಸಾವರ್ಕರ್ ಅವರ ಮೌಲ್ಯಗಳಿಂದಾಗಿ (ಸಂಸ್ಕಾರ್)  ನಾವು ದೇಶ ನಿರ್ಮಾಣದ ಉದ್ದೇಶದೊಂದಿಗೆ ರಾಷ್ಟ್ರವಾದವನ್ನು ಮುಂದಿಟ್ಟಿದ್ದೇವೆ,'' ಎಂದು ಪ್ರಧಾನಿ ಮೋದಿ ಸಾವರ್ಕರ್ ಅವರನ್ನು ಹೊಗಳುತ್ತಾ ಅಕ್ಟೋಬರ್ 16ರರಂದು ಮಹಾರಾಷ್ಟ್ರದ ಅಕೋಲ ಎಂಬಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದ್ದನ್ನು ಉಲ್ಲೇಖಿಸಿ ಕುಲಕರ್ಣಿ ತಮ್ಮ ಎರಡನೇ ಟ್ವೀಟ್ ಮಾಡಿದ್ದಾರೆ.

ಧನಂಜಯ್ ಕೀರ್ ಅವರ ವೀರ್ ಸಾವರ್ಕರ್ ಕೃತಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಕುಲಕರ್ಣಿ "ಎರಡನೇ ವಾಸ್ತವ : ಮುಸ್ಲಿಮರು ಮೊದಲು ಮುಸ್ಲಿಮರಾಗಿ ಉಳಿಯುತ್ತಾರೆ, ಯಾವತ್ತೂ ಭಾರತೀಯರಾಗುವುದಿಲ್ಲ'' ಎಂದು ವೀರ್  ಜನ ಸಂಘದ ಸ್ಥಾಪಕ ಎಸ್ ಪಿ ಮುಖರ್ಜಿಗೆ 26.8.52ರಂದು ಹೇಳಿದ್ದರು (ಪುಟ 448)

ಕುಲಕರ್ಣಿ ಅವರ ಮೂರನೇ ಟ್ವೀಟ್ ಕೂಡ ಅದೇ ಕೃತಿಯನ್ನು ಉಲ್ಲೇಖಿಸಿ ನಾಥೂರಾಂ ಗೋಡ್ಸೆ ನಡೆಸಿದ ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರದ ಕುರಿತಂತೆ ಹೇಳುತ್ತದೆ.

"ಅವರು ಭಾರತ ರತ್ನಕ್ಕೆ ಅರ್ಹರೇ , ವಾಸ್ತವ 3 :  ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಅವರು ಖುಲಾಸೆಗೊಂಡರೂ ಗೋಡ್ಸೆ ಮತ್ತಿತರರು ಗೌರವಪೂರ್ವಕವಾಗಿ ಅವರ ಕಾಲಿಗೇಕೆ ಬಿದ್ದರು ? ಏಕೆಂದರೆ `ವೀರ್' ಅವರ `ಗುರು' ಆಗಿದ್ದರು (ಪುಟ 416).

ನಾಲ್ಕನೇ ಟ್ವೀಟ್ ಕೂಡ ಅದೇ ಪುಸ್ತಕದ ಒಂದು ಭಾಗದಲ್ಲಿ ಸಾವರ್ಕರ್ ಬೌದ್ಧರ ಕುರಿತಂತೆ ಹೇಳಿದ್ದನ್ನು ಉಲ್ಲೇಖಿಸಿ "ಮಿಲಿಟರಿಸಂನಲ್ಲಿ ನಂಬಿಕೆಯುಳ್ಳವರೇ ಅವರ ದೃಷ್ಟಿಯಲ್ಲಿ ದೇಶಭಕ್ತರು, ಶಾಂತಿಯ ಪ್ರತಪಾದಕರು ದೇಶದ್ರೋಹಿಗಳು'' ಎಂದು ಕುಲಕರ್ಣಿ ಬರೆದಿದ್ದಾರೆ.

ಆರನೇ ಟ್ವೀಟ್  'ಕಲೆಕ್ಟೆಡ್ ವಕ್ರ್ಸ್ ಇನ್ ಹಿಂದಿ' ಎಂಬ ಕೃತಿಯನ್ನು ಉಲ್ಲೇಖಿಸಿದೆ.

"ಮುಸ್ಲಿಮರು ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸಿದ್ದರಿಂದ ಮುಸ್ಲಿಂ ಮಹಿಳೆಯರ ಮೇಲೆ ಪ್ರತೀಕಾರದ ಕ್ರಮವಾಗಿ ಅತ್ಯಾಚಾರ ನಡೆಸಬೇಕೆಂದು ಅವರು ಆಗ್ರಹಿಸಿದ್ದರು.  'ರಾಷ್ಟ್ರಘಾತಕ' ಶಿವಾಜಿ ಕೂಡ 'ವೈರಿ ಮಹಿಳೆಯರ' ಕುರಿತಂತೆ ಮೃದು ಧೋರಣೆ ಹೊಂದಿದ್ದರು'' ಎಂಬುದನ್ನು ಉಲ್ಲೇಖಿಸಿದ್ದಾರೆ (ಕಲೆಕ್ಟೆಡ್ ವಕ್ರ್ಸ್ ಇನ್ ಹಿಂದಿ ಪುಟ 192).

ಅರನೇ ಟ್ವೀಟ್ ನಲ್ಲಿ ಪತ್ರಕರ್ತ ವೈಭವ್ ಪುರಂದರೆ ಬರೆದ 'ಸಾವರ್ಕರ್ : ದಿ ಟ್ರೂ ಸ್ಟೋರಿ ಆಫ್ ದಿ ಫಾದರ್ ಆಫ್ ಹಿಂದುತ್ವ'' ಉಲ್ಲೇಖಿಸಿದ ಕುಲಕರ್ಣಿ - ``ಸೋದರ ಬಾಬರಾವ್ ಹಾಗೂ ಅವರು ಜಿನ್ನಾ ಹತ್ಯೆಗೈಯ್ಯಲು ಸಂಚು ಹೂಡಿದ್ದರು. ಅದು ಕೂಡ 1929ರಲ್ಲಿ, ಅದೂ  ಜಿನ್ನಾ ಪಾಕಿಸ್ತಾನ ಬೇಕೆಂಬ ಬೇಡಿಕೆ ಮುಂದಿಡುವ ಮೊದಲು (ಪುಟ 227).

"ದುಃಖಕರವಾಗಿ ವೀರ್ ತಮ್ಮ ಜೀವನದ ದ್ವಿತೀಯಾರ್ಧದಲ್ಲಿ ಮುಸ್ಲಿಂ ವಿರೋಧಿಯಾಗಿ ಬಿಟ್ಟರು" ಎಂದು ತಮ್ಮ ಏಳನೇ ಟ್ವೀಟ್ ನಲ್ಲಿ ಕುಲಕರ್ಣಿ ಬರೆದಿದ್ದಾರೆ.

ತಮ್ಮ ಎಂಟನೇ  ಹಾಗೂ ಆಂತಿಮ ಟ್ವೀಟ್ ನಲ್ಲಿ ಅವರು ಸರ್ದಾರ್ ಪಟೇಲ್ ಅವರು ಸಾವರ್ಕರ್ ಮತ್ತವರ ಹಿಂದು ಮಹಾಸಭಾ ಸಂಘಟನೆಯನ್ನು ಕೋಮುವಾದಿ ಎಂದಿದ್ದರು ಎಂದು ಕುಲಕರ್ಣಿ  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News