ಚುನಾವಣಾ ಆಯುಕ್ತರನ್ನು ಕೊಲಿಜಿಯಂ ಮೂಲಕ ನೇಮಕ ಅಗತ್ಯ: ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ

Update: 2019-10-22 12:24 GMT

ಬೆಂಗಳೂರು, ಅ.22: ಚುನಾವಣಾ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿರಬೇಕಾದರೆ ಕೇಂದ್ರದಲ್ಲಿನ ಚುನಾವಣಾ ಆಯುಕ್ತರನ್ನು ಕೊಲಿಜಿಯಂ ಮೂಲಕ ಆಯ್ಕೆ ಮಾಡುವ ಅಗತ್ಯವಿದೆ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಮಂಡಳಿ ಮತ್ತು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಇಂದ್ರಜಿತ್ ಗುಪ್ತ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಚುನಾವಣಾ ಸುಧಾರಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಇದುವರೆಗೂ ನಿವೃತ್ತಿಗೊಂಡ ಚುನಾವಣಾ ಆಯುಕ್ತರುಗಳು ವಿವಿಧ ಪಕ್ಷಗಳಿಗೆ ಸೇರಿರುವ ಉದಾಹರಣೆಗಳು ಕಾಣಬಹುದು. ಹೀಗಾಗಿ, ಯಾವುದೇ ಆಮಿಷಗಳಿಲ್ಲದಂತೆ ಕೆಲಸ ನಿರ್ವಹಿಸುವವರು ಆಯೋಗದ ಮುಖ್ಯಸ್ಥರಾಗಬೇಕು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಇಂದಿನ ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರಕಾರದ ಏಜೆಂಟ್ ಆಗಿದೆ. ಅನೇಕರು ಆಯೋಗದ ವಿರುದ್ಧ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ, ನ್ಯಾಯಯುತವಾದ ಚುನಾವಣಾ ವ್ಯವಸ್ಥೆ ಬರಬೇಕಾದರೆ, ಅಲ್ಲಿರುವ ವ್ಯಕ್ತಿಗಳು ಯಾವುದೇ ಪಕ್ಷದ ವಕ್ತಾರರಾಗಿರಬಾರದು ಎಂದು ತಿಳಿಸಿದರು.

ಚುನಾವಣಾ ವ್ಯವಸ್ಥೆಯಲ್ಲಿ ಹೆಚ್ಚು ಮತಗಳಿಸುವವರಿಗೆ ಅನುಪಾತ ಆಧಾರದಲ್ಲಿ ಪ್ರಾತಿನಿಧ್ಯ ಸಿಗುವಂತಹ ವ್ಯವಸ್ಥೆ ಜಾರಿಯಾಗಬೇಕಿದೆ. ಮತದಾನದ ಬಳಿಕ ಗೆಲುವಿನ ಅಂತರವನ್ನು ಗೆದ್ದ ಅಭ್ಯರ್ಥಿಗಳ ಅಂತರದಲ್ಲಿ ಪರಿಗಣಿಸಲಾಗುತ್ತಿದೆ. ಆದರೆ, ಅದು ನಿಜವಾದ ಪ್ರಜಾಪ್ರಭುತ್ವವಲ್ಲ ಎಂದರು.

2019 ರ ಲೋಕಸಭಾ ಚುನಾವಣೆಯಲ್ಲಿ ಶೇ.37-38 ರಷ್ಟು ಮತ ಪಡೆದಿರುವ ಪಕ್ಷ, ಅಧಿಕ ಸ್ಥಾನ ಪಡೆದಿದೆ ಎಂಬ ಕಾರಣಕ್ಕೆ ಅಧಿಕಾರ ಹಿಡಿದಿದೆ. ಆದರೆ, ಒಟ್ಟಾರೆ ಮತದಾನವನ್ನು ನೋಡಿದರೆ ಅದರ ಪ್ರಮಾಣ ಕಡಿಮೆ ಇದೆ. ಇನ್ನು ಎಡಪಕ್ಷಗಳು ಸೇರಿದಂತೆ ಅನೇಕ ಪಕ್ಷಗಳಿಗೆ ಪಾರ್ಲಿಮೆಂಟ್‌ನಲ್ಲಿ ಪ್ರಾತಿನಿದ್ಯವೇ ಇಲ್ಲದಾಗಿದೆ ಎಂದು ಹೇಳಿದರು.

ಕೇಂದ್ರ ಸರಕಾರವು ಪಕ್ಷಗಳಿಗೆ ದೇಣಿಗೆ ಪಡೆಯುವುದನ್ನು ಕಾನೂನುಬದ್ಧ ಮಾಡಿದೆ. ಇದನ್ನೇ ಬಳಸಿಕೊಂಡು ಚುನಾವಣೆಗಾಗಿ ಹಿಂದಿನ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯು ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ಹಣ ಪಡೆದಿದ್ದಾರೆ. ಆದರೆ, ಈ ಕುರಿತು ಇಡಿ, ಸಿಬಿಐ ಯಾವುದೇ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ ಎಂದು ದೂರಿದರು.

ಚುನಾವಣಾ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಾಗೂ ಮಹಿಳೆಯರಿಗೆ ಸಮಾನವಾದ ಮೀಸಲಾತಿ ಸಿಗಬೇಕು. ಗೀತಾ ಮುಖರ್ಜಿ ಅವರ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಅವರು ನುಡಿದರು.

ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ಬಾಹ್ಯ ಸುಧಾರಣೆಗಳು ಅತಿಮುಖ್ಯವಾಗಿದೆ. ಕೇವಲ ಅಭ್ಯರ್ಥಿ ಆಯ್ಕೆ, ಮತದಾನವಷ್ಟೇ ಅಲ್ಲ, ಸೈದ್ದಾಂತಿಕ ರಾಜಕಾರಣದೊಳಗೆ, ಸಮಯ ಸಾಧಕ ರಾಜಕಾರಣ ಪ್ರವೇಶಿಸಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಜತೆಗೆ, ಅದರಲ್ಲಿ ಚುನಾವಣಾ ಘೋಷಣೆಯಾದ ಬಳಿಕ ಹಾಗೂ ಫಲಿತಾಂಶದ ಬಳಿಕ ಪಕ್ಷಾಂತರವಾಗುವವರನ್ನು ಅನರ್ಹರು ಎಂದು ಘೋಷಿಸುವ ರೀತಿಯಲ್ಲಿ ತಿದ್ದುಪಡಿಯಾಗಬೇಕಿದೆ. ಹೀಗಾಗಿ, ಸೈದ್ಧಾಂತಿಕ ರಾಜಕಾರಣಕ್ಕೆ ಮರು ಜೀವ ನೀಡಬೇಕಿದೆ ಎಂದು ಹೇಳಿದರು.

ಕೇವಲ ಮತ ಚಲಾವಣೆಯಲ್ಲಿ ಮಾತ್ರ ಸಮಾನತೆ ಸಾಧಿಸಿದರೆ ಸಾಕಾಗುವುದಿಲ್ಲ. ಬದಲಾಗಿ, ಆರ್ಥಿಕ ಮತ್ತು ಸಾಮಾಜಿಕ ವಾಗಿಯೂ ನಾವು ಸಮನಾಗಿ ಸಾಗಬೇಕು. ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಇಂದು ಆರ್ಥಿಕ ನಾಯಕತ್ವ ನಮ್ಮನ್ನಾಳುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಬಿ.ಎಲ್.ಶಂಕರ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್, ಸಿಪಿಐ ನಾಯಕ ಸಾತಿ ಸುಂದರೇಶ್, ಸಿದ್ಧನಗೌಡ ಪಾಟೀಲ್ ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಎನ್‌ಆರ್‌ಸಿಯನ್ನು ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸಲೆಂದೇ ಜಾರಿ ಮಾಡಿದೆ. ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಿ, ಹಿಂದೂರಾಷ್ಟ್ರ ನಿರ್ಮಾಣ ಮಾಡುವುದಾಗಿದೆ. ಅಲ್ಲದೆ, ಒಂದೇ ದೇಶ-ಒಂದೇ ಕಾನೂನು, ಒಂದೇ ದೇಶ-ಒಂದೇ ಧರ್ಮ, ಒಂದೇ ದೇಶ-ಒಂದೇ ಚುನಾವಣೆ ತರಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡಲು ಬಿಡಬಾರದು.

- ಡಿ.ರಾಜಾ, ರಾಜ್ಯಸಭಾ ಸದಸ್ಯ ಹಾಗೂ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News