ನೆರೆ ಸಂತ್ರಸ್ತರ ನೆರವಿಗೆ ಸಚಿವರ ತಂಡಗಳಿಂದ ರಾಜ್ಯಾದ್ಯಂತ ಪ್ರವಾಸ: ಸಚಿವ ಮಾಧುಸ್ವಾಮಿ

Update: 2019-10-22 13:02 GMT

ಬೆಂಗಳೂರು, ಅ.22: ನೆರೆ ಸಂತ್ರಸ್ತರಿಗೆ ನೆರವು ಒದಗಿಸಲು ಸಚಿವ ಸಂಪುಟದ ಎಲ್ಲ ಸಚಿವರು ವಿವಿಧ ತಂಡಗಳಾಗಿ ನಾಳೆಯಿಂದ(ಬುಧವಾರ) ರಾಜ್ಯಾದ್ಯಂತ ಮೂರು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ನೆರೆ ಹಾವಳಿಯಿಂದ ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆಯೂ ಸಚಿವರ ತಂಡ ಪ್ರವಾಸ ಕೈಗೊಂಡು ನೆರೆ ಸಂತ್ರಸ್ತರಿಗೆ ನೆರವು ಒದಗಿಸಿತ್ತು ಎಂದರು.

ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಈವರೆಗೆ 84 ಮಂದಿ ಮೃತಪಟ್ಟಿದ್ದು, 14 ಜನ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಮತ್ತೆ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರಿಗೂ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.

ನೆರೆ ಹಾವಳಿಯಿಂದ ಆಗಿರುವ ನಷ್ಟದ ಕುರಿತು ಮಾಸಾಂತ್ಯದೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರದಿಂದ ಸೂಚನೆ ಬಂದಿದೆ. ರಾಜ್ಯ ಸರಕಾರವು ಪರಿಷ್ಕೃತ ನಷ್ಟದ ವರದಿಯನ್ನು ಈ ಮಾಸಾಂತ್ಯದೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ. ಆನಂತರ ನಮಗೆ ಪರಿಹಾರ ಸಿಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲು ‘ಸುರಕ್ಷಾ ದೀಪ’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸಿಸಿಟಿವಿಗಾಗಿ 11500 ಕ್ಯಾಮೆರಾ ಅಳವಡಿಕೆ, ಸೇಫ್ಟಿ ಲೈಟ್ ಅಳವಡಿಕೆಗೆ 637 ಕೋಟಿ ರೂ.ಗಳನ್ನು ನಿರ್ಭಯಾ ಯೋಜನೆಯಡಿಯಲ್ಲಿ ಖರ್ಚು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕ್ಯಾಮೆರಾ ಹಾಗೂ ಸೇಫ್ಟಿ ಲೈಟ್ ಇರುವೆಡೆ ಒಂದು ಬಟನ್ ನೀಡಲಾಗುತ್ತದೆ. ತೊಂದರೆಗೊಳಗಾದವರು ಅದನ್ನು ಒತ್ತಿದರೆ, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನೆಯಾಗುತ್ತದೆ. ಅದನ್ನು ಆಧರಿಸಿ ಸುರಕ್ಷಿತ ತಂಡ ಸ್ಥಳಕ್ಕೆ ದೌಡಾಯಿಸಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕೃಷಿ ಅಭಿವೃದ್ಧಿ ನಿಗಮಕ್ಕೆ 400 ಕೋಟಿ ರೂ., ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಕ್ಕೆ 18 ಕೋಟಿ ರೂ.ಸಾಲ ಪಡೆಯಲು ಖಾತ್ರಿ ನೀಡಲು ಒಪ್ಪಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಲ್ಲಿ ಸಿರಿಗಂಧ ಕಿಟ್ ನೀಡಲು 18.6 ಕೋಟಿ ರೂ.ಹೆಚ್ಚುವರಿ ಹಣ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕ್ಯಾಲ್ಸಿಯಂ ಮಾತ್ರೆ ಖರೀದಿಗೆ 14.37 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಗುಪ್ತ ವಾರ್ತೆ ಕಟ್ಟಡ ನಿರ್ಮಾಣ ಹಾಗೂ ಬೆಳಗಾವಿಯಲ್ಲಿ 17 ಕೋಟಿ ರೂ.ವೆಚ್ಚದಲ್ಲಿ ಕಮೀಷನರೇಟ್‌ಗೆ ಹೊಸ ಕಟ್ಟಡ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕರ್ನಾಟಕ ರಾಜ್ಯ ಭಾಷಾ ನಿಯಮಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕವನ್ನು ಮಂಡಿಸಲಾಗುವುದು. ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಎರಡು ಜೊತೆ ಸಮವಸ್ತ್ರ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ 1000 ಕೋಟಿ ರೂ.ಟರ್ಮ್ ಲೋನ್ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಭದ್ರಾವತಿಯ ಬಹುಗ್ರಾಮ ಯೋಜನೆಗೆ 18 ಕೋಟಿ ರೂ., ದೇವದುರ್ಗ ತಾಲೂಕಿನ 3 ಕಾಮಗಾರಿಗಳಿಗೆ 110 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ 28 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ಹೇಳಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಮೇಲಿನ ಪ್ರೀತಿಯಿಂದಾಗಿ ಹೊನ್ನಾಳಿ ಉಪ ವಿಭಾಗವಾಗಿ ಮೇಲ್ದರ್ಜೆಗೆ ಹಾಗೂ ಅಜ್ಜಂಪುರ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News