ಯಾರಿಗೇ ಮತ ಒತ್ತಿದರೂ ಬಿದ್ದಿದ್ದು ಬಿಜೆಪಿಗೇ ಎಂಬ ಗ್ರಾಮಸ್ಥರ ಆರೋಪ ನಿರಾಕರಿಸಿದ ಚುನಾವಣಾಧಿಕಾರಿ

Update: 2019-10-22 13:58 GMT

ಪುಣೆ,ಅ.22: ಸಾತಾರಾ ಲೋಕಸಭಾ ಕ್ಷೇತ್ರಕ್ಕೆ ಸೋಮವಾರ ನಡೆದ ಉಪಚುನಾವಣೆಯ ವೇಳೆ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ದೋಷಪೂರಿತವಾಗಿತ್ತು ಎಂದು ಆರೋಪಿಸಿರುವ ಕೋರೆಗಾಂವ ತಾಲೂಕಿನ ನವಲೆವಾಡಿ ಗ್ರಾಮಸ್ಥರು,ಇದರಿಂದಾಗಿ ತಾವು ಯಾರಿಗೇ ಮತ ಒತ್ತಿದರೂ ಅದು ಬಿಜೆಪಿ ಅಭ್ಯರ್ಥಿಯ ಖಾತೆಗೇ ಸೇರುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಇದನ್ನು ಚುನಾವಣಾಧಿಕಾರಿಗಳು ನಿರಾಕರಿಸಿದ್ದಾರೆ.

ನವಲೆವಾಡಿ ಗ್ರಾಮದ ಬೆಳವಣಿಗೆಗೆ ಭೇಟಿ ನೀಡಿದ್ದ ಸಂದರ್ಭ ಇಂತಹ ವಿದ್ಯಮಾನ ಸಂಭವಿಸಿದ್ದಕ್ಕೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಎನ್‌ಸಿಪಿ ಶಾಸಕ ಶಶಿಕಾಂತ್ ಶಿಂದೆ ಹೇಳಿದರು. ಚುನಾವಣಾ ಆಯೋಗವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದು ಪುನರಾವರ್ತನೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ನವಲೆವಾಡಿ ಗ್ರಾಮವನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಕೋರೆಗಾಂವ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೀರ್ತಿ ನಲವಾಡೆ ಅವರು ಇದನ್ನು ತಿರಸ್ಕರಿಸಿದ್ದಾರೆ.

ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ ಪಾಟೀಲ್ ಅವರಿಗೆ ಚಲಾಯಿಸಿದ ಮತಗಳು ಬಿಜೆಪಿ ಅಭ್ಯರ್ಥಿ ಉದಯನರಾಜೇ ಭೋಸಲೆ ಅವರ ಖಾತೆಗೆ ಸೇರುತ್ತಿದ್ದವು ಎಂದು ಗ್ರಾಮಸ್ಥರು ತಿಳಿಸಿದರು.

ತಾನು ಮತಗಟ್ಟೆಗೆ ತೆರಳಿ ಚುನಾವಣಾಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರು ಅವಸರದಿಂದ ಇವಿಎಂ ಅನ್ನು ಬದಲಿಸಿದ್ದರು ಎಂದು ಶಿಂದೆ ಹೇಳಿದರು.

ತಾನು ಮತಗಟ್ಟೆಗೆ ಭೇಟಿ ನೀಡಿದಾಗ ಸುಮಾರು 270 ಮತಗಳು ಅದಾಗಲೇ ಒಂದೇ ರೀತಿಯಲ್ಲಿ ಚಲಾವಣೆ ಯಾಗಿದ್ದವು. ಕೆಲವು ಮತದಾರರು ಈ ಬಗ್ಗೆ ತಮ್ಮ ಶಂಕೆಗಳನ್ನು ವ್ಯಕ್ತಪಡಿಸಿದ್ದರು. ತನ್ಮಧ್ಯೆ ಓರ್ವ ಮತದಾರ ಗುಂಡಿಯನ್ನು ಒತ್ತುವ ಮೊದಲೇ ಬಿಜೆಪಿಯ ಚಿಹ್ನೆಯ ಎದುರಿನ ಕೆಂಪುದೀಪವು ಬೆಳಗಿತ್ತು. ಮತದಾರ ಇದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದಾಗ ಯಂತ್ರದಲ್ಲಿ ಸಮಸ್ಯೆಯಿರುವುದನ್ನು ಅಲ್ಲಿದ್ದ ಅಧಿಕಾರಿಗಳು ಮೌಖಿಕವಾಗಿ ಒಪ್ಪಿಕೊಂಡಿದ್ದರು. ತನ್ನ ಸಲಹೆಯಂತೆ ಮುಖ್ಯ ಚುನಾವಣಾಧಿಕಾರಿಯ ಸಮಕ್ಷಮ ಮತದಾರನೋರ್ವ ಮತ ಚಲಾಯಿಸಲು ಮುಂದಾದಾಗ ಇವಿಎಂ ಏಕಾಏಕಿ ಸ್ಥಗಿತಗೊಂಡಿತ್ತು. ಅದನ್ನು ಪರಿಶೀಲಿಸಿದ ಅಧಿಕಾರಿಗಳು ಸಮಸ್ಯೆಯಿದೆ ಎಂದು ಹೇಳಿ ಯಂತ್ರವನ್ನು ಬದಲಿಸಿದ್ದರು ಎಂದರು.

ಇಷ್ಟೆಲ್ಲ ಆಗುವಾಗ 293 ಮತಗಳು ಚಲಾವಣೆಯಾಗಿದ್ದವು ಮತ್ತು ಹೊಸದಾಗಿ ಮತದಾನ ನಡೆಸಬೇಕೆಂಬ ಚುನಾವಣಾ ಏಜೆಂಟರು ಮತ್ತು ಮತದಾರರ ಬೇಡಿಕೆಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು ಎಂದು ಶಿಂದೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News