ಬೆಂಗಳೂರು: ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2019-10-22 14:07 GMT

ಬೆಂಗಳೂರು, ಅ.22: ಬಿಇಎಂಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನೌಕರರ ಸಂಘದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಇಎಂಎಲ್ ಮಾರಾಟ ಮತ್ತು ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆದುಕೊಳ್ಳುವುದು. ಖಾಸಗೀಕರಣ ಮಾಡುವ ನಿರ್ಧಾರದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಇಎಂಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ, ಬಿಇಎಂಎಲ್ ಕಾರ್ಖಾನೆಯ ಮುಂಭಾಗದಲ್ಲಿ ಅ.25ರ ವರೆಗೆ ಧರಣಿ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಮೆಟ್ರೋ ಬೋಗಿಗಳನ್ನು ತಯಾರಿಸುವ ಕೇಂದ್ರ ಸರಕಾರದ ಏಕೈಕ ಸಾರ್ವಜನಿಕ ಉದ್ಯಮವಾಗಿರುವ ಬಿಇಎಂಎಲ್ ಖಾಸಗೀಕರಣ ಸಲ್ಲದು. ಕಾರ್ಖಾನೆಯಲ್ಲಿ ಬೆಂಗಳೂರು ಕಂಪೆನಿಯಲ್ಲಿ ಸಾವಿರಾರು ನೌಕರರಿದ್ದು, ಇವರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಅವರು ತಿಳಿಸಿದರು.

ರಕ್ಷಣಾ ಸಚಿವಾಲಯದ ಅಧೀನದ ಬಿಇಎಂಎಲ್ ಬೆಂಗಳೂರು, ಕೆಜಿಎಫ್, ಸೇರಿ ಹಲವು ಕಡೆ ಘಟಕ ಹೊಂದಿದೆ. 4 ಪ್ರಾದೇಶಿಕ, 20 ಸೇವಾ ಕಚೇರಿ ಹೊಂದಿರುವ ಬೃಹತ್ ಸಂಸ್ಥೆಯಾಗಿದ್ದು, ಇಲ್ಲಿ ರೈಲು, ಮೆಟ್ರೋ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗುತ್ತಿದೆ. ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಟ್ರಕ್ಕುಗಳು, ಮಿಸೈಲ್, ಮಿಸೈಲ್ ಲಾಂಚರ್, ಬುಲ್ಡೋಜರ್ ವಾಹನಗಳನ್ನು ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಕ್ರಮ ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡ ಆರ್.ನಾರಾಯಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News