ಬೆಂಗಳೂರು: ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್‌ಗೆ ಜಿಲ್ಲಾಧಿಕಾರಿ ಅಂತಿಮ ನೋಟಿಸ್

Update: 2019-10-22 14:15 GMT

ಬೆಂಗಳೂರು, ಅ.22: ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್‌ಗೆ ರಾಜ್ಯ ಸರಕಾರದಿಂದ ಗುತ್ತಿಗೆ ಮಂಜೂರು ಮಾಡಿದ ಪ್ರದೇಶದಲ್ಲಿನ 150x100 ಅಡಿಗಳ(15 ಸಾವಿರ ಚದರ ಅಡಿ) ಜಾಗವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನವರಿಗೆ ಉಪ-ಗುತ್ತಿಗೆ ನೀಡಿದ್ದಾರೆ. ಅಲ್ಲದೇ, ಅಲ್ಲಿ ನಿರ್ಮಿಸಲಾಗಿರುವ ಪೆಟ್ರೋಲ್ ಬಂಕ್‌ನ ಬಾಡಿಗೆ ಮೊತ್ತದಲ್ಲಿ ಶೇ.50ರಷ್ಟನ್ನು ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್‌ನವರೆ ಪಡೆಯುತ್ತಿರುವುದರಿಂದ ಸರಕಾರಕ್ಕೆ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ ಚಾಲ್ತಿ ಉಪ-ಗುತ್ತಿಗೆ ಅವಧಿಯಲ್ಲಿ 3.14 ಕೋಟಿ ರೂ.ಸಂಗ್ರಹಿಸದೇ ಇರುವುದರಿಂದ ಸರಕಾರಕ್ಕೆ ನಷ್ಟ ಉಂಟಾಗಿದೆ ಎಂದು ಲೆಕ್ಕ ಪರಿಶೋಧನೆ ವೇಳೆ ಮಹಾಲೇಖಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆದುದರಿಂದ, ಈ ನೋಟಿಸ್ ತಲುಪಿದ 7 ದಿನಗಳೊಳಗಾಗಿ ಸರಕಾರಕ್ಕೆ ಪಾವತಿಸಬೇಕಾದ 3.14 ಕೋಟಿ ರೂ.ಗಳನ್ನು ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್ ಕಚೇರಿಯಿಂದ ಚಲನ್ ಪಡೆದು ಸರಕಾರಕ್ಕೆ ಜಮಾ ಮಾಡಿಸಿ ಚಲನ್ ಪ್ರತಿಯನ್ನು ಸಲ್ಲಿಸಬೇಕು. ಇಲ್ಲದಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಕಾನೂನಿನ ಅಡಿಯಲ್ಲಿ ವಸೂಲಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಬೌರಿಂಗ್ ಇನ್ಸ್‌ಟಿಟ್ಯೂಟ್‌ಗೆ 14 ಕೋಟಿ ರೂ.ದಂಡ

ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್‌ನವರು ಮನರಂಜನೆ ಕೇಂದ್ರ ಸ್ಥಾಪನೆ ಮಾಡಲು ಪಡೆದಿದ್ದ ಜಾಗದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿಯಮಾವಳಿಗಳನ್ನು ಉಲ್ಲಂಘಿಸಿ ಉಪ ಗುತ್ತಿಗೆ ನೀಡಿರುವುದರಿಂದ ಅವರಿಗೆ 14 ಕೋಟಿ ರೂ.ದಂಡ ವಿಧಿಸಲಾಗುವುದು. ಅಲ್ಲದೆ, ಆ ಜಾಗವನ್ನು ಸರಕಾರದ ವಶಕ್ಕೆ ಪಡೆದು ಬಿಬಿಎಂಪಿಗೆ ಹಸ್ತಾಂತರಿಸಿ, ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News