ನಾನು ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ: ದೇವೇಗೌಡ

Update: 2019-10-22 14:31 GMT

ಬೆಂಗಳೂರು, ಅ.22: ರಾಜ್ಯದ ವಿವಿಧ ಪುರಸಭೆ, ನಗರಸಭೆ ಹಾಗೂ ನಗರ ಪಾಲಿಕೆಗಳ 418 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಮಂಗಳೂರಿನಲ್ಲಿ ಒಬ್ಬರು ಮುಸ್ಲಿಂ ಕಾರ್ಪೋರೇಟರ್ ಇದ್ದಾರೆ. ಅಲ್ಲಿ 3-4 ಸ್ಥಾನಗಳಲ್ಲಿ ನಾವು ಗೆಲ್ಲುವ ಸಾಧ್ಯತೆಯಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಮಂಗಳವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ನಾನು ಬಿ.ಎಂ.ಫಾರೂಕ್ ಬಳಿ ಚರ್ಚೆ ಮಾಡಿದ್ದೇನೆ. ಮಂಗಳೂರಿನಲ್ಲಿ ನಾನೇ ಹೋಗಿ ಪ್ರಚಾರ ಮಾಡುತ್ತೇನೆ. ನಾನು ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ ಎಂದರು.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳಲ್ಲಿ ತೆರವಾಗಿರುವ ಸ್ಥಾನಗಳ ಪೈಕಿ ಬಹುತೇಕ ಎಲ್ಲ ಕಡೆ ನಾವು ಸ್ಪರ್ಧಿಸುತ್ತೇವೆ. ದಾವಣಗೆರೆಯಲ್ಲಿ ಸಂಪೂರ್ಣವಾಗಿ ನಮಗೆ ಬಲ ಇದೆ ಎಂದು ಹೇಳುವುದಿಲ್ಲ, ಅಲ್ಲಿನ ಮುಖಂಡರ ಜೊತೆ ಮಾತನಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ, ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಅವರು ತಿಳಿಸಿದರು. ಯಾದಗಿರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ. ಮುಖ್ಯಮಂತ್ರಿ ಕಾರಿಗೆ ಮುತ್ತಿಗೆ ಹಾಕಿದ್ದಾರೆಂದು ಪೋಲಿಸರು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಅಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನನ್ನ ಕಾರ್ಯಕರ್ತರಿಗೆ ಎಲ್ಲೆ ತೊಂದರೆಯಾದರೂ ನಾನು ಸುಮ್ಮನೆ ಇರುವುದಿಲ್ಲ. ಆ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ದೇವೇಗೌಡ ಹೇಳಿದರು.

ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪ್ರತಿನಿಧಿಸುತ್ತಿರುವ ಗುರುಮಿಠ್ಕಲ್ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ನೀಡಿದ್ದ ಅನುದಾನಕ್ಕೆ ಯಡಿಯೂರಪ್ಪ ತಡೆ ನೀಡಿದ್ದರು. ಆದುದರಿಂದ, ಅವರ ಕಾರು ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಅಂತಹವರ ಮೇಲೆ ಮೊಕದ್ದಮೆಗಳನ್ನು ದಾಖಲಿಸಿ, ಹಿಂಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಈ ಸಂಬಂಧ ಮಾತನಾಡಿದ್ದೇನೆ. ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದವರನ್ನು ಅಮಾನತ್ತು ಮಾಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಮಾತನಾಡಿದಾಗಲೂ ಅದನ್ನೇ ಹೇಳಿದ್ದರು. ಆನಂತರ ಅವರ ಮೇಲೆ ಒತ್ತಡ ಬಂದಿರಬೇಕು, ಆದುದರಿಂದ, ಯಾರ ವಿರುದ್ಧವು ಕ್ರಮ ಕೈಗೊಂಡಿಲ್ಲ. ನಾನು ನಾಳೆ ಅಲ್ಲಿ ಹೋಗಿ ನೋಡಿದ ಮೇಲೆ ಮಾತನಾಡುತ್ತೇನೆ ಎಂದು ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News