ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಎಚ್‌ಎಸ್‌ಪಿ ಸೇರಲು ಸಹೋದ್ಯೋಗಿ ಆಧಾರ್ ಕಾರ್ಡ್ ಬಳಸಿದ ಆರೋಪಿ

Update: 2019-10-22 14:37 GMT

ಸೂರತ್, ಅ. 22: ಕಮಲೇಶ್ ತಿವಾರಿಯ ಹತ್ಯೆ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಸೂರತ್ ನಿವಾಸಿ ಅಶ್ಫಾಕ್ ಶೇಖ್ ತಿವಾರಿಯ ಹಿಂದು ಸಮಾಜ್ ಪಕ್ಷ (ಎಚ್‌ಎಸ್‌ಪಿ) ಸೇರಲು ತನ್ನ ಸಹೋದ್ಯೋಗಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಎಚ್‌ಎಸ್‌ಪಿ ವರಿಷ್ಠ ತಿವಾರಿ (45) ಅವರನ್ನು ಲಕ್ನೋದ ನಾಕಾ ಹಿಂಡೋಲದಲ್ಲಿರುವ ಪ್ರದೇಶದಲ್ಲಿ ಅಕ್ಟೋಬರ್ 18ರಂದು ಹತ್ಯೆಗೈಯಲಾಗಿತ್ತು. ಅವರ ಹತ್ಯೆ ಪ್ರಕರಣದಲ್ಲಿ ಶೇಖ್ ಹಾಗೂ ಮೊಯ್ದಿನನ್ನು ಪ್ರಮುಖ ಶಂಕಿತರು ಎಂದು ಗುರುತಿಸಲಾಗಿತ್ತು.

ಶೇಕ್ ತನ್ನ ಸಹೋದ್ಯೋಗಿ ರೋಹಿತ್ ಸೋಲಂಕಿಯ ಆಧಾರ್ ಕಾರ್ಡ್‌ನಲ್ಲಿ ತನ್ನ ಫೋಟೊ ಅಂಟಿಸಿದ್ದ. ಅಲ್ಲದೆ, ಆಧಾರ್ ಕಾರ್ಡ್ ಜನ್ಮ ದಿನಾಂಕವನ್ನು ಕೂಡ ಬದಲಾಯಿಸಿದ್ದ. ತಿವಾರಿ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬರುವುದಕ್ಕಿಂತ ಮುನ್ನ ಶೇಕ್ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ ಎಂದು ರೋಹಿತ್ ಸೋಲಂಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ನಾನು ಔಷಧ ಕಂಪೆನಿಯೊಂದರಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಕಂಪೆನಿಯ ನೀತಿಯಂತೆ ಸೇರುವಾಗ ಔಪಚಾರಿಕತೆ ಪೂರ್ಣಗೊಳಿಸಲು ಆಧಾರ್ ಕಾರ್ಡ್ ಅನ್ನು ಕಂಪೆನಿಯ ಏರಿಯಾ ಮ್ಯಾನೇಜರ್ ಆಗಿದ್ದ ಅಶ್ಫಾಕ್ ಶೇಕ್‌ಗೆ ನೀಡಿದ್ದೆ. ಆತ ನನ್ನ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬುದು ಈಗ ತಿಳಿಯಿತು’’ ಎಂದು ರೋಹಿತ್ ಸೋಲಂಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News