ಕೆನಡ: ಬಹುಮತ ಕಳೆದುಕೊಂಡ ಲಿಬರಲ್ ಪಕ್ಷ; ಭಾರತೀಯ ಮೂಲದ ನಾಯಕ ಕಿಂಗ್‌ ಮೇಕರ್?

Update: 2019-10-22 17:49 GMT

ಒಟ್ಟಾವ (ಕೆನಡ), ಅ. 22: ಕೆನಡದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರೂಡೊ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಅವರ ಲಿಬರಲ್ ಪಕ್ಷದ ವಿಜಯದ ಅಂತರವು ಕಡಿಮೆಯಾಗಿದ್ದು ಸರಕಾರ ರಚಿಸಲು ಅವರಿಗೆ ಇತರ ಪಕ್ಷಗಳ ಬೆಂಬಲ ಅಗತ್ಯವಾಗಿದೆ.

ಆಡಳಿತಾರೂಢ ಲಿಬರಲ್ ಪಕ್ಷವು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತವನ್ನು ಕಳೆದುಕೊಂಡಿದೆ.

ಮಂಗಳವಾರ ಬೆಳಗ್ಗೆಯೂ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದು, ಲಿಬರಲ್ ಪಕ್ಷವು 157 ಸ್ಥಾನಗಳನ್ನು ಗೆದ್ದಿದೆ. 338 ಸದಸ್ಯ ಬಲದ ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 170 ಸ್ಥಾನಗಳು ಅಗತ್ಯವಾಗಿದೆ. ಈಗ ಅದು 13 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ.

ಪ್ರತಿಪಕ್ಷ ಕನ್ಸರ್ವೇಟಿವ್ ಪಕ್ಷವು 121 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಕಳೆದ ಬಾರಿ ಅದು 95 ಸ್ಥಾನಗಳನ್ನು ಹೊಂದಿತ್ತು.

ಕ್ಯೂಬೆಕ್‌ನ ಪ್ರತ್ಯೇಕತಾವಾದಿ ಪಕ್ಷ ಬ್ಲಾಕ್ ಕ್ಯೂಬೆಕಾಯಿಸ್ 32 ಸ್ಥಾನಗಳನ್ನು ಗೆಲ್ಲುವುದೆಂದು ನಿರೀಕ್ಷಿಸಲಾಗಿದೆ.

ಭಾರತ ಮೂಲದ ಜಗ್ಮೀತ್ ಸಿಂಗ್ ನೇತೃತ್ವದ ಎಡಪಂಥೀಯ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) 24 ಸ್ಥಾನಗಳನ್ನು ಗೆದ್ದಿದೆ.

ಗ್ರೀನ್ ಪಕ್ಷವು ಮೂರು ಸ್ಥಾನಗಳಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಭಾರತೀಯ ಮೂಲದ ನಾಯಕ ಕಿಂಗ್‌ಮೇಕರ್?

ಭಾರತ ಮೂಲದ ಕೆನಡಿಯನ್ ಜಗ್ಮೀತ್ ಸಿಂಗ್ ನೇತೃತ್ವದ ಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ 24 ಸ್ಥಾನಗಳನ್ನು ಗೆದ್ದಿದ್ದು, ಕೆನಡ ಸರಕಾರದ ‘ಕಿಂಗ್‌ಮೇಕರ್’ ಆಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳಿವೆ.

ಪ್ರಧಾನಿ ಜಸ್ಟಿನ್ ಟ್ರೂಡೊ ನೇತೃತ್ವದ ಲಿಬರಲ್ ಪಕ್ಷವು 157 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದಕ್ಕೆ ಸರಕಾರ ರಚಿಸಲು 13 ಸ್ಥಾನಗಳ ಅಗತ್ಯವಿದೆ.

ನೂತನ ಸರಕಾರದಲ್ಲಿ ‘ರಚನಾತ್ಮಕ ಪಾತ್ರ’ವನ್ನು ವಹಿಸುವ ಇಂಗಿತವನ್ನು ಜಗ್ಮೀತ್ ಸಿಂಗ್ ವ್ಯಕ್ತಪಡಿಸಿದ್ದಾರೆ ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.

ಎಲ್ಲರಿಗೂ ಸಮೃದ್ಧಿ ಉಂಟಾಗಲಿ: ಟ್ರೂಡೋ

‘‘ನಾವು ಯಾರಿಗೂ ಹಾನಿ ಬಯಸುವುದಿಲ್ಲ, ಎಲ್ಲರಿಗೂ ಸಮೃದ್ಧಿ ಉಂಟಾಗಲೆಂದು ಆಶಿಸುತ್ತೇವೆ. ಈ ಸಾಮಾನ್ಯ ಗುರಿಯ ಆಧಾರದಲ್ಲಿ ನಾವು ಒಗ್ಗಟ್ಟಾದರೆ, ಅದನ್ನು ಸಾಧಿಸಬಹುದು ಎನ್ನುವ ನಂಬಿಕೆ ನನಗಿದೆ’’ ಎಂದು ಮಾಂಟ್ರಿಯಲ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರೂಡೋ ಹೇಳಿದರು.

ಅಭಿವೃದ್ಧಿ ಪರ ನೀತಿಗಳನ್ನು ಬೆಂಬಲಿಸಿ ಕೆನಡಿಯನ್ನರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News