ಪಾಕ್‌ನ ಉಗ್ರ ಬೆಂಬಲ ಭಾರತ-ಪಾಕ್ ಮಾತುಕತೆಯಲ್ಲಿ ಪ್ರಮುಖ ಅಡಚಣೆ: ಅಮೆರಿಕ

Update: 2019-10-22 16:58 GMT

ವಾಶಿಂಗ್ಟನ್, ಅ. 22: ಶಿಮ್ಲಾ ಒಪ್ಪಂದದಲ್ಲಿ ನಿಗದಿಪಡಿಸಿರುವಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನೇರ ಮಾತುಕತೆಯನ್ನು ತಾನು ಬೆಂಬಲಿಸುವುದಾಗಿ ಅಮೆರಿಕ ಮಂಗಳವಾರ ಹೇಳಿದೆ. ಆದರೆ, ಗಡಿಯಾಚೆಯ ಭಯೋತ್ಪಾದನೆಯಲ್ಲಿ ತೊಡಗಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ನೀಡುತ್ತಿರುವ ನಿರಂತರ ಬೆಂಬಲವು ಮಾತುಕತೆಗೆ ‘ಪ್ರಮುಖ ಅಡಚಣೆ’ಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

‘‘1972ರ ಶಿಮ್ಲಾ ಒಪ್ಪಂದದಲ್ಲಿ ಹೇಳಿರುವಂತೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನೇರ ಮಾತುಕತೆಯು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಂಬಿದ್ದೇವೆ’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಉಸ್ತುವಾರಿ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆ್ಯಲಿಸ್ ಜಿ. ವೆಲ್ಸ್ ಹೇಳಿದರು.

ಅವರು ಹೌಸ್ ವಿದೇಶ ವ್ಯವಹಾರಗಳ ಸಮಿತಿಯ ಏಶ್ಯ, ಪೆಸಿಫಿಕ್ ಮತ್ತು ಪರಮಾಣು ಪ್ರಸರಣ ನಿಷೇಧ ಕುರಿತ ಉಪ ಸಮಿತಿಗೆ ವಿವರಣೆ ನೀಡುತ್ತಿದ್ದರು.

2006-2007ರ ಅವಧಿಯಲ್ಲಿ ನಡೆದ ಹಿಂಬಾಗಿಲ ಮಾತುಕತೆಗಳ ವೇಳೆ, ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಹತ್ವದ ಪ್ರಗತಿ ಸಾಧಿಸಿದ್ದವು ಎಂದು ನಂಬಲಾಗಿದೆ ಎಂದು ಅವರು ಹೇಳಿದರು.

‘‘ಏನು ಸಾಧ್ಯ ಎನ್ನುವುದನ್ನು ಇತಿಹಾಸ ನಮಗೆ ತೋರಿಸಿದೆ’’ ಎಂದು ಕಾಂಗ್ರೆಸ್ ಉಪ ಸಮಿತಿಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

‘‘ಯಶಸ್ವಿ ದ್ವಿಪಕ್ಷೀಯ ಮಾತುಕತೆಯನ್ನು ಪುನರಾರಂಭಿಸಲು ವಿಶ್ವಾಸ ನಿರ್ಮಾಣ ಅಗತ್ಯವಾಗಿದೆ. ಆದರೆ, ಗಡಿಯಾಚೆಯ ಭಯೋತ್ಪಾದನೆಯಲ್ಲಿ ತೊಡಗಿರುವ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುತ್ತಿರುವುದು ಈ ನಿಟ್ಟಿನಲ್ಲಿ ದೊಡ್ಡ ತಡೆಯಾಗಿದೆ’’ ಎಂದು ಅವರು ನುಡಿದರು.

“ನಾಗರಿಕ ಸಮಾಜ, ಮಾಧ್ಯಮ ಸ್ವಾತಂತ್ರಕ್ಕೆ ಬೆದರಿಕೆ ‘ಆತಂಕಕಾರಿ’”

ಪಾಕಿಸ್ತಾನದಲ್ಲಿ ನಾಗರಿಕ ಸಮಾಜ ಮತ್ತು ಮಾಧ್ಯಮ ಸ್ವಾತಂತ್ರಕ್ಕೆ ಅವಕಾಶ ಕಡಿಮೆಯಾಗುತ್ತಿರುವುದು ‘ಆತಂಕಕಾರಿಯಾಗಿದೆ’ ಎಂದು ಅಮೆರಿಕ ಸೋಮವಾರ ಹೇಳಿದೆ ಹಾಗೂ ಆ ದೇಶದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳು ಹಾಗೂ ಧರ್ಮದ ಕಾರಣಕ್ಕಾಗಿ ಜನರು ಎದುರಿಸುತ್ತಿರುವ ತಾರತಮ್ಯಗಳ ಕುರಿತ ವರದಿಗಳಿಂದ ‘ಗಂಭೀರ ಕಳವಳ’ಗೊಂಡಿರುವುದಾಗಿಯೂ ಅದು ತಿಳಿಸಿದೆ.

ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಉಸ್ತುವಾರಿ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆ್ಯಲಿಸ್ ಜಿ. ವೆಲ್ಸ್, ಹೌಸ್ ವಿದೇಶ ವ್ಯವಹಾರಗಳ ಸಮಿತಿಯ ಏಶ್ಯ, ಪೆಸಿಫಿಕ್ ಮತ್ತು ಪರಮಾಣು ಪ್ರಸರಣ ನಿಷೇಧ ಕುರಿತ ಉಪ ಸಮಿತಿಗೆ ನೀಡಿದ ಲಿಖಿತ ವಿವರಣೆಯಲ್ಲಿ ಇದನ್ನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News