ಸವಿತಾ ಸಮಾಜದ ಅಭಿವೃದ್ದಿ ನಿಗಮದ ಅಧ್ಯಕ್ಷರ ನೇಮಕ ಶೀಘ್ರ: ಡಾ.ಅಶ್ವಥ್ ನಾರಾಯಣ

Update: 2019-10-22 18:36 GMT

ಬೆಂಗಳೂರು, ಅ.22: ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರ ಅಧ್ಯಕ್ಷರನ್ನೂ ನೇಮಕ ಮಾಡಲಾಗುವುದು, ಈ ಮೂಲಕ ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ ಅಶ್ವತ್ಥ್ ನಾರಾಯಣ ತಿಳಿಸಿದರು.

ಮಂಗಳವಾರ ನಗರದಲ್ಲಿ ರಾಜ್ಯ ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸವಿತಾ ಸಮಾಜ ನಮ್ಮ ಜೀವನದ ದಿನನಿತ್ಯದ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾದ ಸ್ವರದ ಮೂಲಕ ನಮ್ಮ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು ಹಾಗೂ ನಮ್ಮ ಅಂದವನ್ನು ಹೆಚ್ಚಿಸುವ ಮೂಲಕ ಆತ್ಮವಿಶ್ವಾಸಕ್ಕೆ ಇಂಬು ನೀಡುವ ಕೆಲಸವನ್ನು ಈ ಸಮಾಜ ನಿರ್ವಹಿಸುತ್ತದೆ ಎಂದರು.

ಸವಿತಾ ಸಮಾಜದ ಅಭಿವೃದ್ದಿಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ನೀಡುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವಾಗಿ ಅಧ್ಯಕ್ಷರ ನೇಮಕವನ್ನು ಮಾಡಲಾಗುವುದು. ಈ ಮೂಲಕವಾಗಿ ಸವಿತಾ ಸಮಾಜ ನಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸೌಂದರ್ಯಕ್ಕೆ ಸಂಬಂಧಿಸಿದ ವ್ಯವಹಾರವು ದೊಡ್ಡ ಉದ್ಯಮ ಕ್ಷೇತ್ರವಾಗಿದೆ. ಈ ಉದ್ಯಮಕ್ಕೆ ಬೇಕಾಗಿರುವ ಕೌಶಲ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ನಮ್ಮ ದೇಶದಲ್ಲಿ ಕೌಶಲ್ಯತೆಯ ಪ್ರಮಾಣ ಇರುವುದು ಶೇ.4 ರಷ್ಟು ಮಾತ್ರ. ಶಿಕ್ಷಣದ ಜೊತೆಯಲ್ಲಿಯೇ ಉದ್ಯೋಗಕ್ಕೆ ಬೇಕಾಗಿರುವಂತಹ ಕೌಶಲ್ಯವನ್ನು ಹೆಚ್ಚಿಸುವುದರ ಅಗತ್ಯವಿದೆ ಎಂದು ಅವರು ತಿಳಿಸಿದರು.

ರಾಜ್ಯ ಸವಿತಾ ಸಮಾಜದ ನೂತನ ಅಧ್ಯಕ್ಷರಾದ ಎನ್.ಸಂಪತ್ ಕುಮಾರ್ ಮಾತನಾಡಿ, ನಮ್ಮ ಸಮಾಜದ ಅಭಿವೃದ್ದಿಗೆ ಅಗತ್ಯವಿರುವ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ಇವುಗಳ ಈಡೇರಿಕೆಗೆ ರಾಜ್ಯ ಸರಕಾರದ ಜೊತೆ ಕೈಜೊಡಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷ ಕೃಷ್ಣ (ಮಾವಳ್ಳಿ ಕಷ್ಣ), ಅಶೋಕ್ ಗಸ್ತಿ, ಕಿರಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News