​ದೂರವಾಣಿ ಕದ್ದಾಲಿಕೆ ಖಾಸಗಿ ಹಕ್ಕಿನ ಉಲ್ಲಂಘನೆ: ಮುಂಬೈ ಹೈಕೋರ್ಟ್

Update: 2019-10-23 03:41 GMT

ಮುಂಬೈ, ಅ.23: ಸಿಬಿಐ ತನಿಖೆ ನಡೆಸುತ್ತಿರುವ ಲಂಚ ಹಗರಣವೊಂದರ ಸಂಬಂಧ ಉದ್ಯಮಿಯೊಬ್ಬರ ದೂರವಾಣಿ ಕರೆಗಳನ್ನು ಕದ್ದಾಲಿಸಲು ಅನುಮತಿ ನೀಡಿದ್ದ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಮುಂಬೈ ಹೈಕೋರ್ಟ್ ರದ್ದುಪಡಿಸಿದೆ. ದೂರವಾಣಿ ಕದ್ದಾಲಿಕೆ ಖಾಸಗಿ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಈಗಾಗಲೇ ಕಾನೂನುಬಾಹಿರವಾಗಿ ನಡೆಸಿದ ಕದ್ದಾಲಿಕೆಯ ದಾಖಲೆಗಳನ್ನು ನಾಶಪಡಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಸಾರ್ವಜನಿಕ ತುರ್ತು ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷೆಯ ಕಾರಣಕ್ಕೆ ಮಾತ್ರ ದೂರವಾಣಿ ಕದ್ದಾಲಿಕೆ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಲಾಗಿದೆ.

ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಮತ್ತು ಎನ್.ಜೆ.ಜಮಾದಾರ್ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ. "ಕಾನೂನುಬಾಹಿರ ಕದ್ದಾಲಿಕೆಗೆ ಅನುಮತಿ ನೀಡುವುದು ನಾಗರಿಕರ ಮೂಲಭೂತ ಹಕ್ಕಿನ ಮತ್ತು ಸುಪ್ರೀಂಕೋರ್ಟ್ ಎತ್ತಿಹಿಡಿದ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ದಕ್ಷಿಣ ಮುಂಬೈ ಉದ್ಯಮಿ ವಿನೀತ್ ಕುಮಾರ್ ಎಂಬುವವರ ದೂರವಾಣಿ ಕದ್ದಾಲಿಕೆಗೆ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಸಾಲ ಸಂಬಂಧಿ ಅನುಕೂಲತೆ ಮಾಡಿಕೊಡಲು ಉದ್ಯಮಿ 10 ಲಕ್ಷ ರೂ. ಲಂಚವನ್ನು ಬ್ಯಾಂಕ್ ಅಧಿಕಾರಿಯೊಬ್ಬರಿಗೆ ನೀಡಿದ್ದರು ಎಂಬ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿತ್ತು. ಹೀಗೆ ಕದ್ದಾಲಿಕೆ ಮಾಡಿದ ಸಂಭಾಷಣೆ ತುಣುಕನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ ಎಂದೂ ಆದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News