ಯಡಿಯೂರಪ್ಪರನ್ನು ಭೇಟಿಯಾದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

Update: 2019-10-23 06:32 GMT

ಬೆಂಗಳೂರು, ಅ.23: ಕಾಂಗ್ರೆಸ್‌ನ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬುಧವಾರ ಬೆಳಗ್ಗೆ ಭೇಟಿಯಾದರು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲನಿಯ ನಿವಾಸದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಪಾಟೀಲ್ ಅರ್ಜಿ ವಿಚಾರಣೆ ಕುರಿತು ಚರ್ಚಿಸಿದರು.

ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಸ್ಕಿಯ ಅನರ್ಹ ಶಾಸಕರಾಗಿರುವ ಪ್ರತಾಪ್ ಗೌಡ ಪಾಟೀಲ್, ಎಲ್ಲ ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಮ್ಮ ನಿರ್ಧಾರ ಅಚಲ ಎಂದರು.

ಸಿದ್ದರಾಮಯ್ಯರಿಗೆ ಅಧಿಕಾರ ಬರಲಿ ಅಥವಾ ಬರದಿರಲಿ ಎಂದು ನಾವು ಪಕ್ಷ ಬಿಟ್ಟಿಲ್ಲ. ವೈಯಕ್ತಿ ಅಸಮಾಧಾನಗಳಿಂದ ನಾವು ಕಾಂಗ್ರೆಸ್ ತೊರೆದಿದ್ದೇವೆ ಎಂದವರು ಹೇಳಿದರು.

ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುಪ್ರೀಂಕೋಟ್ ತೀರ್ಪಿನ ಬಳಿಕ ಎಲ್ಲ ಒಟ್ಟಾಗಿ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಉಪಚುನಾವಣೆಗೆ ಸಂಬಂಧಿಸಿ ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್ ಮತ್ತು ನಳಿನ್ ಕುಮಾರ್ ಕಟೀಲು ಜೊತೆ ಚರ್ಚಿಸಿದ್ದು, ಸಹಕರಿಸುವಂತೆ ಕೋರಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News