ಎಸ್ಸಿ-ಎಸ್ಟಿ ಸಮುದಾಯದ 5 ಸಾವಿರ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ: ಡಿಸಿಎಂ ಕಾರಜೋಳ

Update: 2019-10-23 11:59 GMT

ಬೆಂಗಳೂರು, ಅ.23: ಮುಂದಿನ ವಾರ್ಷಿಕ ಸಾಲಿನಿಂದ ಎಸ್ಸಿ-ಎಸ್ಟಿ ಸಮುದಾಯದ 5 ಸಾವಿರ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ನಗರದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್ಸಿ-ಎಸ್ಟಿ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ಯೋಜನೆಗೆ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮದಡಿ ಪರಿಶಿಷ್ಟ ಜಾತಿಯ 3,373, ಪರಿಶಿಷ್ಟ ಪಂಗಡದ 966 ಮಂದಿಯನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಆಯ್ಕೆ ಮಾಡಲಾಗಿದೆ. ಜತೆಗೆ, 9 ಮಂದಿ ವಿದೇಶಿ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಉನ್ನತ ದರ್ಜೆಯ ಉದ್ಯೋಗಗಳನ್ನು ಪಡೆಯಲು ಈ ತರಬೇತಿ ಸಹಾಯಕವಾಗಲಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ, ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಾವು ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಇಲಾಖೆಯ ಪ್ರಬುದ್ಧ ಯೋಜನೆಯೂ ಉನ್ನತ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ತೆರಳುವ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಇಂಜಿನಿಯರಿಂಗ್, ಮೂಲ ವಿಜ್ಞಾನ ಹಾಗೂ ಆನ್ವಯಿಕ ವಿಜ್ಞಾನ, ಕೃಷಿ ವಿಜ್ಞಾನ ಹಾಗೂ ವೈದ್ಯಕೀಯ (ಸ್ನಾತಕೋತ್ತರ), ಅಂತರ್‌ರಾಷ್ಟ್ರೀಯ ವಾಣಿಜ್ಯ, ಅರ್ಥಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ, ಮಾನವಶಾಸ್ತ್ರ, ಸಮಾಜ ವಿಜ್ಞಾನ, ಲಲಿತಕಲೆ ಮತ್ತು ಕಾನೂನು ವಿಷಯಗಳಲ್ಲಿ ವಿದೇಶ ಅಧ್ಯಯನ ಮಾಡುವವರಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗುತ್ತದೆ. ಯೋಜನೆಯಡಿ ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕ, ವಾಸದ ವೆಚ್ಚ ಹಾಗೂ ವಿಮಾನಯಾನ ವೆಚ್ಚಗಳನ್ನು ಸರಕಾರದ ಕಡೆಯಿಂದ ಭರಿಸಲಾಗುತ್ತದೆ ಎಂದರು.

ಈ ಬಾರಿ ತರಬೇತಿ ಕಾರ್ಯಕ್ರಮದಡಿ ಸುಮಾರು 58 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಇಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಚೆನ್ನೈ, ದೆಹಲಿ, ಮುಂಬಯಿ, ಹೈದರಾಬಾದ್ ಸೇರಿದಂತೆ ಹಲವು ಕಡೆ ತರಬೇತಿ ನೀಡಲಾಗುತ್ತದೆ ಎಂದು ಗೋವಿಂದ ಕಾರಜೋಳ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News