ಟ್ರಕ್ ಕಂಟೇನರ್ ನಲ್ಲಿ 39 ಮೃತದೇಹಗಳು ಪತ್ತೆ: ಚಾಲಕನ ಬಂಧನ

Update: 2019-10-23 17:42 GMT

ಲಂಡನ್, ಅ. 23: ಲಂಡನ್ ಸಮೀಪ ಟ್ರಕ್ಕೊಂದರ ಕಂಟೇನರ್‌ನಲ್ಲಿ ಬುಧವಾರ 39 ದೇಹಗಳು ಪತ್ತೆಯಾಗಿವೆ ಎಂದು ಬ್ರಿಟಿಶ್ ಪೊಲೀಸರು ಹೇಳಿದ್ದಾರೆ. ಈ ಟ್ರಕ್ ಬಲ್ಗೇರಿಯದಿಂದ ಬಂದಿದೆ ಎಂದು ಭಾವಿಸಲಾಗಿದೆ.

 ಲಂಡನ್‌ನ ಪೂರ್ವದ ಗ್ರೇಸ್‌ನಲ್ಲಿರುವ ಕೈಗಾರಿಕಾ ಪ್ರಾಂಗಣವೊಂದರಲ್ಲಿ ಪತ್ತೆಯಾದ ಜನರೆಲ್ಲರೂ ಮೃತಪಟ್ಟಿದ್ದಾರೆ ಎಂಬುದಾಗಿ ಸ್ಥಳದಲ್ಲೇ ಘೋಷಿಸಲಾಯಿತು ಎಂದು ಎಸೆಕ್ಸ್ ಪೊಲೀಸರು ತಿಳಿಸಿದರು. ಮೃತರಲ್ಲಿ 38 ವಯಸ್ಕರು ಮತ್ತು ಒಂದು ಹದಿಹರೆಯದ ವ್ಯಕ್ತಿ ಇದ್ದಾರೆ ಎಂದು ಹೇಳಲಾಗಿದೆ.

ಕೊಲೆಯ ಆರೋಪದಲ್ಲಿ ನಾರ್ದರ್ನ್ ಐರ್‌ಲ್ಯಾಂಡ್‌ನ 25 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

‘‘ಇದು ದುರಂತ ಘಟನೆಯಾಗಿದೆ. ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ಎಸೆಕ್ಸ್ ಪೊಲೀಸ್‌ನ ಮುಖ್ಯ ಸುಪರಿಂಟೆಂಡೆಂಟ್ ಆ್ಯಂಡ್ರೂ ಮರೀನರ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಈ ಘಟನೆಯಿಂದ ನನಗೆ ಆಘಾತವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬಣ್ಣಿಸಿದ್ದಾರೆ ಹಾಗೂ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವಾಟರ್‌ಗ್ಲೇಡ್ ಕೈಗಾರಿಕಾ ಪ್ರಾಂಗಣದಲ್ಲಿ ಜನರನ್ನು ಹೊಂದಿರುವ ಟ್ರಕ್ ಕಂಟೇನರ್ ಪತ್ತೆಯಾದ ಬಳಿಕ, ಬುಧವಾರ ಮುಂಜಾನೆ 1:40ರ ಸುಮಾರಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದರು.

‘‘ನಾವು ಮೃತರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಆದರೆ, ಇದು ಸುದೀರ್ಘ ಪ್ರಕ್ರಿಯೆಯಾಗುವ ನಿರೀಕ್ಷೆಯಿದೆ’’ ಎಂದು ಮರೀನರ್ ಹೇಳಿದರು.

‘‘ಲಾರಿ ಬಲ್ಗೇರಿಯದಿಂದ ಬಂದಿದೆ ಎಂದು ನಾವು ಭಾವಿಸಿದ್ದೇವೆ’’ ಎಂದರು.

‘‘ಘಟನೆಗೆ ಸಂಬಂಧಿಸಿ ಲಾರಿ ಚಾಲಕನನ್ನು ನಾವು ಬಂಧಿಸಿದ್ದೇವೆ’’ ಎಂದು ಅವರು ತಿಳಿಸಿದರು.

ಟ್ರಕ್ ವೇಲ್ಸ್‌ನ ವಾಯುವ್ಯ ತುದಿಯಲ್ಲಿರುವ ಹೋಲಿಹೆಡ್ ಮೂಲಕ ಶನಿವಾರ ಬ್ರಿಟನನ್ನು ಪ್ರವೇಶಿಸಿದೆ ಎಂದು ಭಾವಿಸಲಾಗಿದೆ ಎಂದರು.

ಮೃತರ ಗುರುತು ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News