ಸಾರ್ವಜನಿಕರೊಂದಿಗೆ ಸಮಾಲೋಚಿಸದೆ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ: ಎನ್‌ಸಿಪಿಆರ್‌ಐ

Update: 2019-10-23 14:37 GMT

ಹೊಸದಿಲ್ಲಿ, ಅ. 22: ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವಾಗ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿಲ್ಲ ಹಾಗೂ ಮಸೂದೆಯನ್ನು ಸಂಸತ್ತಿನ ಯಾವುದೇ ಸಮಾಲೋಚನ ಸಮಿತಿಗೆ ಶಿಫಾರಸು ಮಾಡಿಲ್ಲ ಎಂದು ‘ದಿ ನ್ಯಾಶನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್‌ಫಾರ್ಮೇಶನ್ (ಎನ್‌ಸಿಪಿಆರ್‌ಐ)’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದೆ.

ಮಾಹಿತಿ ಹಕ್ಕು ತಿದ್ದುಪಡಿ ಕಾಯ್ದೆ-2019 ಅಸ್ತಿತ್ವಕ್ಕೆ ಬಂದ ಬಳಿಕ ಮಾಹಿತಿ ಹಕ್ಕು ಆಯುಕ್ತರ ವೇತನ, ಅಧಿಕಾರಾವಧಿ ಹಾಗೂ ಸೇವೆಯ ಶರತ್ತುಗಳಿಗೆ ಸಂಬಂಧಿಸಿದ ನಿಮಮಗಳನ್ನು ಸೂಚಿಸುವಲ್ಲಿ ಕೇಂದ್ರ ಸರಕಾರದ ವಿಫಲತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಎನ್‌ಸಿಪಿಆರ್‌ಐ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪತ್ರ ರವಾನಿಸಿದೆ. 2014ರ ಪೂರ್ವ-ಶಾಸಕಾಂಗ ಸಮಾಲೋಚನ ನೀತಿಯಲ್ಲಿ ಅಳವಡಿಸಲಾದ ಕಾರ್ಯವಿಧಾನಕ್ಕೆ ಅನುಗುಣವಾಗಿ ಅಗತ್ಯವಿರುವ ನಿಯಮಗಳನ್ನು ರೂಪಿಸಲು ಹಾಗೂ ಎಲ್ಲ ಕರಡನ್ನು ಅಭಿಪ್ರಾಯ ಹಾಗೂ ಸಲಹೆಗಳಿಗಾಗಿ ಸಾರ್ವಜನಿಕರ ಮುಂದಿರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳುವ ಖಾತರಿ ನೀಡುವಂತೆ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

ಹೋರಾಟಗಾರರಾದ ಅಂಜಲಿ ಭಾರದ್ವಾಜ್, ನಿಖಿಲ್ ಡೇ, ವೆಂಕಟೇಶ್ ನಾಯಕ್, ಪಂಕ್ತಿ ಜೋಗ್, ಪ್ರದೀಪ್ ಪ್ರಧಾನ್, ರಾಕೇಶ್, ಡಾ. ಶೇಕ್ ಗುಲಾಮ್ ರಸೂಲ್ ಹಾಗೂ ಇತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಮಾಹಿತಿ ಹಕ್ಕು ಆಯೋಗಗಳ ಸ್ವಾಯತ್ತತೆ ದುರ್ಬಲಗೊಳಿಸುವ ಮೂಲಕ ಆರ್‌ಟಿಐ ತಿದ್ದುಪಡಿ ಕಾಯ್ದೆ ಕಾನೂನನ್ನು ದುರ್ಬಲಗೊಳಿಸಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಕೇಂದ್ರ ಮಾಹಿತಿ ಹಕ್ಕು ಆಯುಕ್ತರು ಹಾಗೂ ಎಲ್ಲ ರಾಜ್ಯ ಮಾಹಿತಿ ಹಕ್ಕು ಆಯೋಗಗಳ ಮುಖ್ಯಸ್ಥರು ಹಾಗೂ ಇತರ ಮಾಹಿತಿ ಆಯುಕ್ತರ ಅಧಿಕಾರಾವಧಿ, ವೇತನ, ಭತ್ಯೆ ಹಾಗೂ ಇತರ ಸೇವಾ ಶರತ್ತುಗಳನ್ನು ಸೂಚಿಸಲು ಸರಕಾರಕ್ಕೆ ಅಧಿಕಾರ ನೀಡಲು 2005ರ ಆರ್‌ಟಿಐ ಕಾಯ್ದೆಯ 13, 15 ಹಾಗೂ 27 ಕಲಂಗಳಿಗೆ ತಿದ್ದುಪಡಿ ತರಲಾಗಿತ್ತು. ಆದರೆ, ಈ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅವರ ಅಂಕಿತ ಹಾಕಿ ಮಂಜೂರಾಗಿ ಮೂರು ತಿಂಗಳು ಕಳೆದರೂ ಕೇಂದ್ರ ಸರಕಾರ ಇದುವರೆಗೆ ಅವಶ್ಯಕ ನಿಯಮಗಳನ್ನು ಸೂಚಿಸಿಲ್ಲ. ಇದರಿಂದ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳು ಖಾಲಿಯಾಗಿವೆ. ಜನರ ಮನವಿ ಹಾಗೂ ದೂರುಗಳ ವಿಲೇವಾರಿ ವಿಳಂಬವಾಗುತ್ತಿದೆ.

ಇದು ಆರ್‌ಟಿಐ ಕಾಯ್ದೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಹೋರಾಟಗಾರರು ಹೇಳಿದ್ದಾರೆ. ಡಿಪಾರ್ಟ್‌ಮೆಟ್ ಆಫ್ ಪರ್ಸನಲ್ ಆ್ಯಂಡ್ ಟ್ರೈನಿಂಗ್ ಕರಡು ನಿಯಮಗಳನ್ನು ಸಿದ್ದಪಡಿಸುತ್ತಿದೆ ಎಂದು ಹೇಳಿರುವ ಇತ್ತೀಚೆಗಿನ ಮಾಧ್ಯಮ ವರದಿಯನ್ನು ಕೂಡ ಹೋರಾಟಗಾರರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News