ಹರ್ಯಾಣ: ಬಿಜೆಪಿಗೆ ಮತ್ತೆ ಶಾಕ್ ನೀಡಿದ ಜೆಜೆಪಿ

Update: 2019-10-25 03:48 GMT
ದುಶ್ಯಂತ್ ಚೌಟಾಲಾ

ಚಂಡೀಗಢ: ಪಕ್ಷ ಆರಂಭವಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದರೂ, ಮೊದಲ ಚುನಾವಣೆಯಲ್ಲೇ 10 ಸ್ಥಾನಗಳನ್ನು ಗೆದ್ದು ಹರ್ಯಾಣ ರಾಜ್ಯದಲ್ಲಿ ಕಿಂಗ್‌ಮೇಕರ್ ಪಾತ್ರ ನಿರ್ವಹಿಸಲು ತುದಿಗಾಗಲ್ಲಿ ನಿಂತಿರುವ ದುಶ್ಯಂತ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಕ್ಷ (ಜೆಜೆಪಿ), ರಾಜ್ಯದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಿಸಿದೆ.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಇದುವರೆಗೆ ಬಿಜೆಪಿಯ ಯಾವ ಮುಖಂಡರೂ ಮಾತುಕತೆ ನಡೆಸಿಲ್ಲ. ಬಿಜೆಪಿಯನ್ನು ಬೆಂಬಲಿಸುವ ಯಾವುದೇ ಯೋಚನೆ ನಮ್ಮ ಪಕ್ಷಕ್ಕಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ನಿಮ್ಮೊಂದಿಗೆ ಮಾತುಕತೆ ನಡೆಸುವ ಹೊಣೆಯನ್ನು ಶಿರೋಮಣಿ ಅಕಾಲಿದಳದ ಬಾದಲ್‌ಗಳಿಗೆ ಬಿಜೆಪಿ ವಹಿಸಿದೆ ಎಂಬ ವದಂತಿ ಬಗ್ಗೆ ಕೇಳಿದ ಪ್ರಶ್ನೆಗೆ, "ನಾನು ಯಾರೊಂದಿಗೂ ಮಾತನಾಡಿಲ್ಲ. ನಮ್ಮ ಎಲ್ಲ ಶಾಸಕರೂ ಜತೆಯಾಗಿ ಕುಳಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಕಾರ್ಯಯೋಜನೆ ಬಗ್ಗೆ ನಿರ್ಧರಿಸುತ್ತೇವೆ" ಎಂದು ಹೇಳಿದರು.

ಸಿರ್ಸಾದ ಪಕ್ಷೇತರ ಶಾಸಕ ಗೋಪಾಲ್ ಕಂದಾ ಈಗಾಗಲೇ ಬಿಜೆಪಿ ಬೆಂಬಲಿಸುವ ವಿಚಾರದಲ್ಲಿ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ನಿಮ್ಮ ನಿರ್ಧಾರ ವಿಳಂಬವಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, "ನಾವು ಕೇವಲ 11 ತಿಂಗಳು ಹಿಂದೆ ನಮ್ಮ ಪಯಣ ಆರಂಭಿಸಿದ್ದೇವೆ. ನಾವು ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ಕೈಗೊಂಡಿರುವುದರಿಂದ ಮತ್ತು ಸಮರ್ಥವಾಗಿ ನಿಭಾಯಿಸಿದ್ದರಿಂದ ಇಷ್ಟು ಮುಂದಕ್ಕೆ ಬಂದಿದ್ದೇವೆ. ಇದೇ ಮಾರ್ಗದಲ್ಲಿ ಮುನ್ನಡೆಯುತ್ತೇವೆ. ನಾವು ಎಲ್ಲರೊಂದಿಗೂ ಚರ್ಚಿಸಿ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳುತ್ತೇವೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News