ಕೃಷಿಮೇಳ-2019: ಎರಡನೆ ದಿನವೂ ಹರಿದು ಬಂದ ಜನಸಾಗರ

Update: 2019-10-25 16:15 GMT

ಬೆಂಗಳೂರು, ಅ.25: ನಗರದ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತಿದೆ.

ಮೊದಲ ದಿನಕ್ಕಿಂತಲೂ ಎರಡನೇ ದಿನ ಕೃಷಿ ಮೇಳ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಕೃಷಿ ಉತ್ಪನ್ನ ಮತ್ತು ಯಂತ್ರೋಪಕರಣಗಳ ಮಾರಾಟವೂ ಭರದಿಂದ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಷ್ಟೇ ಅಲ್ಲದೆ, ದೂರದ ಬೆಳಗಾವಿ, ರಾಯಚೂರು, ಗದಗ, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ರೈತ ಮಹಿಳೆಯರು ಕೃಷಿ ಮೇಳಕ್ಕೆ ಬಂದಿದ್ದರು. ಶಾಲಾ, ಕಾಲೇಜು, ವಿ.ವಿ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕೃಷಿ ಯಂತ್ರೋಪಕರಣ ಮಳಿಗೆ, ಸಿರಿಧಾನ್ಯಗಳು ಮತ್ತು ಸಾವಯವ ಕೃಷಿ ಮಳಿಗೆ, ಹೈನುಗಾರಿಕೆ ಮಳಿಗೆ ಕೃಷಿ ಆಸಕ್ತರಿಂದ ತುಂಬಿದ್ದವು. ಬೆಳೆ ಪದ್ಧತಿ ಮತ್ತು ಯಂತ್ರೋಪಕಕರಣ, ತಂತ್ರಜ್ಞಾನ ಬಳಕೆ ಬಗ್ಗೆ ರೈತರು ತಜ್ಞರಿಂದ ಮಾಹಿತಿ ಪಡೆಯುತ್ತಿದ್ದರು.

ಸಂಶೋಧನಾ ಕೇಂದ್ರದ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಭತ್ತ, ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ, ದಂಟಿನ ಸೊಪ್ಪು, ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಗಳನ್ನು ರೈತರು ವೀಕ್ಷಿಸಿದರು. ಪ್ರಸಕ್ತ ಸಾಲಿನ ಕೃಷಿ ಮೇಳದಲ್ಲಿ ಏಳು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಯಿತು. ಅವುಗಳ ತಳಿಗಳನ್ನು ಪ್ರಾತ್ಯಕ್ಷಿಯ ತಾಕುಗಳಲ್ಲಿ ಬೆಳೆಸಲಾಗಿದ್ದು, ರೈತರು ಇವುಗಳ ಕಡೆ ಸಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದರು.

ಸೆಲ್ಫಿ ಸಂಭ್ರಮ: ಕೃಷಿ ಮೇಳದಲ್ಲಿ ಅದ್ಧೂರಿಯಾಗಿ ತಯಾರಿಸಿದ ಸಭಾಂಗಣ ಎಲ್ಲರ ಗಮನ ಸೆಳೆಯುತ್ತಿದೆ. ಸಭಾಂಗಣದ ಹೊರಗಡೆ ಮಹಾತ್ಮಗಾಂಧೀಜಿ ಹಾಗೂ ಜಯ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ. ಅವು ಎಲ್ಲರನ್ನು ಆಕರ್ಷಿಸುತ್ತಿದ್ದು, ಮೇಳಕ್ಕೆ ಆಗಮಿಸುವ ಸಾವಿರಾರು ಜನರನ್ನು ಕೈ ಬೀಸಿ ಕರೆಯುತ್ತಿದೆ. ಸಭಾಂಗಣದ ಎದುರು ಯುವಕ-ಯುವತಿಯರು ಮುಗಿಬಿದ್ದು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು.

ಮಣ್ಣಿಲ್ಲದೆ ಹೂ, ಸೊಪ್ಪು ಬೆಳೆಯುವುದು: ಮಣ್ಣನ್ನು ಬಳಸದೇ ನೀರಿನಲ್ಲಿರುವ ಪೋಷಕಾಂಶಗಳ ದ್ರಾವಣವನ್ನು ಬಳಸಿಕೊಂಡು ಸೊಪ್ಪು, ಹೂ ಮತ್ತು ಅಲಂಕಾರಿಕ ಸಸ್ಯಗಳು ಬೆಳೆಯುವ ಹೈಡ್ರೋಫೋನಿಕ್ಸ್ ಕೃಷಿ ಪದ್ಧತಿ ನಗರವಾಸಿಗಳನ್ನು ಹೆಚ್ಚು ಸೆಳೆಯುತ್ತಿದೆ.

ಕೃಷಿ ತ್ಯಾಜ್ಯದಿಂದ ಕರಕುಶಲ ವಸ್ತು: ಕೃಷಿ ತ್ಯಾಜ್ಯಗಳಾದ ತೆಂಗಿನ ನಾರು, ತೆಂಗಿನ ಚಿಪ್ಪು, ಹರಿದ ಬಟ್ಟೆ, ಹತ್ತಿಯ ಕಾಯಿ ಚಿಪ್ಪೆ, ಅಡಕೆ ಎಲೆ, ಬಾಳೆ ನೀರು, ಭತ್ತದ ತೌಡಿನಿಂದ ತಯಾರಿಸಿರುವ ಆಲಂಕಾರಿಕ ವಸ್ತು, ಗೃಹ ಬಳಕೆಯ ವಸ್ತುಗಳು ಮೇಳದಲ್ಲಿ ಸಾಕಷ್ಟು ಕಣ್ಮನ ಸೆಳೆಯುತ್ತಿವೆ.

ಲಾಭದಾಯಕ ತರಕಾರಿಗಳ ಪರಿಚಯ: ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವುದು ತರಕಾರಿ ಬೆಳೆಗಳು. ರೈತರ ಆದಾಯವನ್ನು ಗಮನದಲ್ಲಿಟ್ಟುಕೊಂಡು ಹೀರೇಕಾಯಿ, ಹಾಗಲ, ಎಲೆಕೋಸು, ಹೂಕೋಸು, ಈರುಳ್ಳಿ, ಟೊಮೆಟೋ, ಸೌತೆಕಾಯಿ, ಕುಂಬಳಕಾಯಿ, ಬೂದುಗುಂಬಳ, ಸೋರೆಕಾಯಿ ಹಾಗೂ ಕರಬೂಜ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಪ್ರಾತ್ಯಕ್ಷಿತೆ ಬೆಳೆಗಳಾಗಿ ಬೆಳೆಯಲಾಗಿತ್ತು. ಇನ್ನು ಮಾರುದ್ದದ ಪಡವಲಕಾಯಿಯನ್ನು ಸಾಗಣೆ ಮಾಡುವುದು ಕಷ್ಟ ಎನ್ನುವ ಉದ್ದೇಶದಿಂದ ಗಿಡ್ಡ ಪಡವಲಕಾಯಿ ಬೆಳೆಯನ್ನು ಪರಿಚಯಿಸಲಾಗಿತ್ತು.

ಬಂದಿಗಳು ಬೆಳೆದ ತರಕಾರಿ, ಹಣ್ಣುಗಳಿಗೆ ಬೇಡಿಕೆ: ದೇವನಹಳ್ಳಿ ಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿ ಬಂದಿಯಾದ ಕೈದಿಗಳು ಬೆಳೆದ ನಾನಾ ತರದ ಹಣ್ಣು-ತರಕಾರಿಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದ ದೃಶ್ಯಗಳು ಕಂಡು ಬಂದವು. ಹುರಳಿಕಾಳು, ಸೋರೆಕಾಯಿ, ಬೀನ್ಸ್, ಸಪೋಟ ಸೇರಿದಂತೆ ಹಲವು ತರಕಾರಿ, ಹಣ್ಣುಗಳನ್ನು ಪ್ರದರ್ಶನ ಮಳಿಗೆಯಲ್ಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News