ಭೀಕರ ಕಾಳ್ಗಿಚ್ಚು: ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ

Update: 2019-10-28 03:49 GMT

ಹೆಡ್ಸ್‌ಬರ್ಗ್: ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಭಾರಿ ಗಾಳಿಯ ಕಾರಣದಿಂದ ಸುಮಾರು 30 ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ. ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಾಜ್ಯದ ಗವರ್ನರ್ ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ಸೊನೊಮೊ ವೈನ್ ಪ್ರದೇಶಕ್ಕೆ ಅಪಾಯ ಎದುರಾಗಿದೆ. ರಾತ್ರೋರಾತ್ರಿ ಕಾಳ್ಗಿಚ್ಚು 30 ಸಾವಿರ ಎಕರೆಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಕೇವಲ ಶೇಕಡ 10ರಷ್ಟು ಬೆಂಕಿಯನ್ನು ನಿಯಂತ್ರಿಸುವುದಷ್ಟೇ ಸಾಧ್ಯವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಬೆಂಕಿಯ ಕೆನ್ನಾಲಿಗೆಗೆ ಈಗಾಗಲೇ ಹಲವು ಮನೆಗಳು ಹಾಗೂ 1869ರಲ್ಲಿ ಸ್ಥಾಪನೆಯಾದ ಸೋಡಾ ರಾಕ್ ವೈನ್ ಘಟಕ ಸೇರಿದಂತೆ ಹಲವು ಘಟಕಗಳನ್ನು ಆಹುತಿ ಪಡೆದಿದೆ. ಇದು ರಾಜ್ಯದಲ್ಲಿ ವ್ಯಾಪಿಸಿರುವ ಅತಿದೊಡ್ಡ ಕಾಳ್ಗಿಚ್ಚು ಎಂದು ಮೂಲಗಳು ಹೇಳಿವೆ.

"ನಾವು ಸುದ್ದಿ ನೋಡಿದ್ದೇವೆ. ಸಂಪೂರ್ಣ ಧ್ವಂಸಗೊಂಡಿದೆ" ಎಂದು ಮಾಲಕರು ಫೇಸ್‌ಬುಕ್ ಸಂದೇಶದಲ್ಲಿ ತಿಳಿಸಿದ್ದು, ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಪ್ರಟಕಿಸಿದೆ. ಕಳೆದ ಬುಧವಾರ ಆರಂಭವಾದ ಬೆಂಕಿ, ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ವ್ಯಾಪಕವಾಗುತ್ತಿದೆ ಎಂದು ಮೂಲಗಳು ಹೇಳಿವೆ. ಗವರ್ನರ್ ಗವಿನ್ ನ್ಯೂಸೊಮ್ ರಾಜ್ಯವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಬೆಂಕಿ ನಂದಿಸಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದೇವೆ ಹಾಗೂ ವಿವಿಧ ಏಜೆನ್ಸಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ. 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News