‘ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಹಾಸ್ಯಾಸ್ಪದ’

Update: 2019-10-28 14:45 GMT

ಬೆಂಗಳೂರು, ಅ.28: ಇಪ್ಪತೈದು ವರ್ಷಗಳ ಹಿಂದಿನ ಪ್ರಕರಣಕ್ಕೆ ಜೀವ ನೀಡಿ, ಸದಾ ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಂಧಿಸಿರುವುದೇ ಹಾಸ್ಯಾಸ್ಪದವಾಗಿದ್ದು ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಪ್ರಗತಿಪರರು, ಚಿಂತಕರು ಆಗ್ರಹಿಸಿದ್ದಾರೆ.

ಪತ್ರಕರ್ತ, ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಖಂಡಿಸಿ ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರಗತಿಪರರು, ಹೋರಾಟಗಾರರು, ಚಿಂತಕರು ಪ್ರತಿಭಟನೆ ನಡೆಸಿದರು.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸಲಾಗಿದೆ. ಇದಕ್ಕೆ ಸಾಕ್ಷಿ ಎಂದರೆ ಇಪ್ಪತೈದು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಎನ್ನುವ ಆರೋಪ. ಬೆಂಗಳೂರಿನಲ್ಲಿಯೆ ನೆಲೆಸಿದ್ದ ನರಸಿಂಹಮೂರ್ತಿ ಜನಪರ ಹೋರಾಟದಲ್ಲಿಯೂ ಸಕ್ರಿಯವಾಗಿದ್ದರು. ಅಷ್ಟೇ ಅಲ್ಲದೆ ಅನೇಕ ಹಿರಿಯ ಪೊಲೀಸರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಇಂತಹ ವ್ಯಕ್ತಿಯನ್ನು ತಲೆಮರೆಸಿಕೊಂಡಿದ್ದ ಎನ್ನುವುದೇ ಹಾಸ್ಯಾಸ್ಪದ ಎಂದು ಪತ್ರಕರ್ತ ಇಂದೂಧರ ಹೊನ್ನಾಪು ನುಡಿದರು.

ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಒಳ್ಳೆಯ ಪತ್ರಕರ್ತ. ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದ. ಈತನನ್ನು ನಕ್ಸಲ್ ಎಂದು ಆರೋಪಿಸಿ ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಇದನ್ನು ಗಮನಿಸಿದರೆ ಪೊಲೀಸ್ ಇಲಾಖೆಗೆ ಮರ್ಯಾದೆ ಇಲ್ಲ ಎಂದು ಗೊತ್ತಾಗುತ್ತಿದೆ ಎಂದರು.

ನರಸಿಂಹಮೂರ್ತಿ ಅವರ ವಿಚಾರಣೆ ನಡೆಸಲಿ. ಅವರು ಮಾಡಿರುವ ಅಪರಾಧಕ್ಕೆ ದಾಖಲೆ ಬಹಿರಂಗಗೊಳಿಸಲಿ. ಈ ಪ್ರಕರಣ ಕೋರ್ಟ್‌ನಲ್ಲೂ ವಿಚಾರಣೆ ಆಗಲಿ. ಆದರೆ ಇದನೆಲ್ಲಾ ಮರೆಮಾಚಿ, ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಅಷ್ಟೇ ಅಲ್ಲದೆ ನರಸಿಂಹಮೂರ್ತಿನನ್ನು ತನಿಖೆಗೊಳಪಡಿಸಿದ ಅಧಿಕಾರಿಗಳು ಅವರನ್ನು ವಿಮಾನ ಹತ್ತಿಸಿರಬಹುದು. ಹಿಂಸೆ ನೀಡಿ ಒಪ್ಪಿಸಿರಬಹುದು. ಈ ಕೆಲಸ ಪೊಲೀಸರಿಗೆ ನೀರು ಕುಡಿದಂತೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿಚಾರವಾದಿ ಜಿ.ರಾಮಕೃಷ್ಣ, ಲೇಖಕಿ ಡಾ. ವಿಜಯಾ, ನ್ಯಾಯವಾದಿ ಬಿ.ಟಿ.ವೆಂಕಟೇಶ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಲೇಖಕ ಯೋಗೇಶ್ ಮಾಸ್ಟರ್, ಸತ್ಯಾ ಸೇರಿಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News