​ಕೊನೆಗೂ ಜೀವಂತ ಹೊರಬರಲಿಲ್ಲ ಸುಜೀತ್...

Update: 2019-10-29 03:51 GMT

ಚೆನ್ನೈ: ತಮಿಳುನಾಡಿನ ತಿರುಚ್ಚಿಯಲ್ಲಿ ಕಳೆದ ಮೂರು ದಿನಗಳಿಂದ ಕೊಳವೆಬಾವಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಬಾಲಕ ಸುಜೀತ್‌ನನ್ನು ಜೀವಂತವಾಗಿ ಹೊರತೆಗೆಯುವ ಕಾರ್ಯಾಚರಣೆ ವಿಫಲವಾಗಿದ್ದು, ಮಂಗಳವಾರ ಮುಂಜಾನೆ ಬಾಲಕನ ಕೊಳೆತ ದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಬಾಲಕನ ರಕ್ಷಣೆಗೆ ಅಧಿಕಾರಿಗಳು ಸಕಲ ಪ್ರಯತ್ನ ಮಾಡಿದ್ದರು. ಕೊಳವೆಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ಬಾಲಕನ ದೇಹ ಪತ್ತೆಯಾದ ತಕ್ಷಣ ಅಗೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಇನ್ನೂ ಸುಮಾರು 12 ಗಂಟೆಗಳ ಕಾರ್ಯಾಚರಣೆ ಬೇಕಾಗಬಹುದು ಎಂದು ಅಧಿಕಾರಿಗಳು ಸೋಮವಾರ ರಾತ್ರಿ ಹೇಳಿಕೆ ನೀಡಿದ್ದರು. ಆದರೆ ಶವ ಕೊಳೆತ ವಾಸನೆ ಕೊಳವೆ ಬಾವಿಯಿಂದ ಬಂದ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿರುವುದು ಖಚಿತ ಎಂಬ ತೀರ್ಮಾನಕ್ಕೆ ಬರಲಾಯಿತು. ಬಳಿಕ ಸುಜೀತ್ ವಿಲ್ಸನ್ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ವಿವರಿಸಿದ್ದಾರೆ.

ಪಾಳು ಕೊಳವೆಬಾವಿ ಸಮೀಪ ಶುಕ್ರವಾರ ಸಂಜೆ ಆಟವಾಡುತ್ತಿದ್ದಾಗ ಸುಜೀತ್ ವಿಲ್ಸನ್ ಕೊಳವೆಬಾವಿಗೆ ಬಿದ್ದಿದ್ದ. ಕಲ್ಲುಬಂಡೆಗಳಿಂದ ಕೂಡಿದ ಕಡಿದಾದ ಪ್ರದೇಶವಾಗಿದ್ದರಿಂದ ಮತ್ತು ಸುರಂಗ ತೋಡುವ ಸಂಕೀರ್ಣ ಪ್ರಕ್ರಿಯೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಿಧಾನವಾಗಿತ್ತು. ಸುಮಾರು 26 ಅಡಿಯಷ್ಟು ಕೆಳಗೆ ಬಾಲಕ ಸಿಕ್ಕಿಹಾಕಿಕೊಂಡಿದ್ದ. ಆದರೆ ಹಗ್ಗದ ಮೂಲಕ ಬಾಲಕನನ್ನು ಮೇಲಕ್ಕೆತ್ತುವ ಪ್ರಯತ್ನದ ವೇಳೆ ಬಾಲಕ 70 ಅಡಿ ಆಳಕ್ಕೆ ಕುಸಿದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News