ದೀಪಾವಳಿ: ರಾಜಧಾನಿಯಲ್ಲಿ ಪಟಾಕಿ ಸಿಡಿತದಿಂದ 80 ಮಂದಿಗೆ ಗಾಯ

Update: 2019-10-29 13:37 GMT

ಬೆಂಗಳೂರು, ಅ.29: ದೀಪಾವಳಿಯ ಸಂಭ್ರಮದ ಮೂರು ದಿನಗಳಲ್ಲಿ ಪಟಾಕಿಗಳ ಸಿಡಿತದಿಂದ ಒಟ್ಟಾರೆ 80 ಕ್ಕೂ ಅಧಿಕ ಮಂದಿಗೆ ಹಾನಿಯಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಳೆದ ಎರಡು ದಿನಗಳಿಂದ ಗಾಯಗೊಂಡವರಲ್ಲಿ ಮೂವರಿಗೆ ಸುಟ್ಟ ಗಾಯಗಳಾಗಿದೆ. ಕಣ್ಣಿಗೆ ಹಾನಿಯಾದವರಲ್ಲಿ ಮೂರು ಜನರಿಗೆ ತೀವ್ರ ಹಾನಿಯಾಗಿದ್ದು, ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 36 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. 

ಬೆಂಗಳೂರಿನ ನಾರಾಯಣ ಕಣ್ಣಿನ ಆಸ್ಪತ್ರೆ, ಮಿಂಟೋ ಕಣ್ಣಿನ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ನೇತ್ರಧಾಮ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿತದಿಂದ ಹಾನಿಗೊಳಗಾದವರು ಚಿಕಿತ್ಸೆ ಪಡೆದಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾನಿಗೊಳಗಾದವರ ಪ್ರಮಾಣ ಅಧಿಕವಾಗಿದೆ. ಹಬ್ಬದ ಎರಡನೆ ದಿನವಾದ ಸೋಮವಾರ ಮಧ್ಯರಾತ್ರಿವರೆಗೂ ಪಟಾಕಿಗಳನ್ನು ಸಿಡಿಸಲಾಗಿದೆ. ನಗರದ ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಮಧ್ಯರಾತ್ರಿವರೆಗೂ ಚಿಕಿತ್ಸೆ ನೀಡಲಾಗಿದೆ.

ಮಕ್ಕಳಿಗೆ ಹೆಚ್ಚಿನ ಹಾನಿ: ಪಟಾಕಿಯಿಂದ ಹಾನಿಗೊಳಗಾದವರ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಮಿಂಟೋದಲ್ಲಿ ಎಂಟು ಮಂದಿ, ನಾರಾಯಣದಲ್ಲಿ 13 ಮಂದಿ ಹಾಗೂ ಶಂಕರದಲ್ಲಿ 6 ಹಾಗೂ ನೇತ್ರಾಧಾಮ ಆಸ್ಪತ್ರೆಯಲ್ಲಿ ಒಂದು ಮಗು ಚಿಕಿತ್ಸೆ ಪಡೆದಿದೆ. ಇದರಲ್ಲಿ 5 ವರ್ಷಕ್ಕಿಂತಲೂ ಚಿಕ್ಕ ವಯಸ್ಸಿನ ಐದಾರು ಮಕ್ಕಳಿದ್ದಾರೆ.

ಮಾಡದ ತಪ್ಪಿಗೆ ಶಿಕ್ಷೆ: ಪುಲಕೇಶಿನಗರ ಫರಾನ್(17) ರವಿವಾರ ಸಂಜೆ ಮನೆಗೆ ತೆರಳುವ ವೇಳೆ ರಸ್ತೆ ಮಧ್ಯೆ ಯಾರೋ ಕಬ್ಬಿಣದ ಡಬ್ಬದಲ್ಲಿಟ್ಟು ಹಚ್ಚಿದ್ದ ಪಟಾಕಿಯಿಂದ ನೇರವಾಗಿ ಕಣ್ಣಿಗೆ ಸಿಡಿದು ಹಾನಿಯಾಗಿದೆ. ಅವರು ಲಾಲ್‌ಬಾಗ್ ಬಳಿಯಿರುವ ಲಯನ್ಸ್ ಕಣ್ಣಿ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಂದಿಗೆ ಚಿಕಿತ್ಸೆ:

ಮಿಂಟೋ ಕಣ್ಣಿನ ಆಸ್ಪತ್ರೆ 20

ನಾರಾಯಣ ನೇತ್ರಾಲಯ 15

ಶಂಕರ ಕಣ್ಣಿನ ಆಸ್ಪತ್ರೆ 10

ಶೇಖರ್ ಆಸ್ಪತ್ರೆ 5

ನೇತ್ರಧಾಮ ಕಣ್ಣಿನ ಆಸ್ಪತ್ರೆ 3

ವಿಕ್ಟೋರಿಯಾ ಸುಟ್ಟಗಾಯಗಳ ಕೇಂದ್ರ 3

ಮೋದಿ ಕೇರ್ ಆಸ್ಪತ್ರೆ 4

ಲಯನ್ಸ್ ಆಸ್ಪತ್ರೆ 5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News