ಅಮೆರಿಕದಲ್ಲಿ ಇದು ಅತ್ಯಂತ ಜನಪ್ರಿಯ ಭಾರತೀಯ ಭಾಷೆ..

Update: 2019-10-31 03:44 GMT

ಅಮೆರಿಕ, ಅ.31: ಹಿಂದಿ ಭಾಷೆ ಅಮೆರಿಕದಲ್ಲಿ ಅತಿ ಹೆಚ್ಚು ಜನರು ಬಳಸುವ ಭಾರತೀಯ ಭಾಷೆಯಾಗಿ ಅಗ್ರಸ್ಥಾನ ಉಳಿಸಿಕೊಂಡಿದೆ. ಗುಜರಾತಿ ಮತ್ತು ತೆಲುಗು ನಂತರದ ಸ್ಥಾನಗಳಲ್ಲಿವೆ.

2018ರ ಜುಲೈ 1ರ ವೇಳೆಗೆ ಅಮೆರಿಕದಲ್ಲಿ 8.74 ಲಕ್ಷ ಮಂದಿ ಹಿಂದಿ ಭಾಷಿಗರಿದ್ದು, 2017ರ ಅಂಕಿಅಂಶಕ್ಕೆ ಹೋಲಿಸಿದರೆ ಹಿಂದಿ ಮಾತನಾಡುವವರ ಸಂಖ್ಯೆ ಶೇಕಡ 1.3ರಷ್ಟು ಹೆಚ್ಚಿದೆ. 2010ರಿಂದ ಎಂಟು ವರ್ಷದ ಅವಧಿಯಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ 2.65 ಲಕ್ಷದಷ್ಟು ಹೆಚ್ಚಿದ್ದು, ಒಟ್ಟಾರೆ ಶೇಕಡ 43.5ರಷ್ಟು ಪ್ರಗತಿಯಾಗಿದೆ.

ಆದರೆ ಶೇಕಡಾವಾರು ಪ್ರಗತಿಯಲ್ಲಿ ತೆಲುಗು ಇತರೆಲ್ಲ ಭಾರತೀಯ ಭಾಷೆಗಳಿಗಿಂತ ಮುಂದಿದೆ. 2010-18ರ ಅವಧಿಯಲ್ಲಿ ಅಮೆರಿಕದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ 79.5ರಷ್ಟು ಹೆಚ್ಚಿದೆ.

ಅಮೆರಿಕದ ಜನಗಣತಿ ಬ್ಯೂರೊ ಬಿಡುಗಡ ಮಾಡುವ ಅಮೆರಿಕನ್ ಕಮ್ಯುನಿಟಿ ಸರ್ವೆ-2018 ಅಂಕಿಅಂಶಗಳ ಪ್ರಕಾರ, ಅಮೆರಿಕದ ನಿವಾಸಿಗಳ ಪೈಕಿ 67.3 ಲಕ್ಷ ದಶಲಕ್ಷ ಮಂದಿ, ತಮ್ಮ ಮನೆಗಳಲ್ಲಿ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳನ್ನು ಮಾತನಾಡುತ್ತಾರೆ. ಇವರಲ್ಲಿ ಅಮೆರಿಕದಲ್ಲೇ ಹುಟ್ಟಿದವರು, ಸಕ್ರಮ ಹಾಗೂ ಅಕ್ರಮ ವಲಸೆಗಾರರು ಸೇರಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯ ಪೈಕಿ ವಿದೇಶಿ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಶೇಕಡ 21.9ರಷ್ಟಿದೆ. ಬಂಗಾಳಿ ಮಾತನಾಡುವವರ ಸಂಖ್ಯೆ ಎಂಟು ವರ್ಷದಲ್ಲಿ ಶೇಕಡ 68ರಷ್ಟು ಹೆಚ್ಚಳ ಕಂಡು 3.75 ಲಕ್ಷ ಆಗಿದ್ದು, ತಮಿಳು ಮಾತನಾಡುವವರ ಸಂಖ್ಯೆ 3.08 ಲಕ್ಷಕ್ಕೆ ಹೆಚ್ಚಿದೆ. ಅಂದರೆ ಎಂಟು ವರ್ಷ ಅವಧಿಯಲ್ಲಿ ಶೇಕಡ 67.5ರಷ್ಟು ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News