ಚುನಾವಣೆ ಆದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲ್ಲ: ಕುಮಾರಸ್ವಾಮಿ

Update: 2019-11-02 12:57 GMT

ಬೆಂಗಳೂರು, ನ.2: ಯಾರು ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ, ಯೋಜನೆಗಳನ್ನು ಯಾರು ಸಮರ್ಪಕವಾಗಿ ಜಾರಿಗೊಳಿಸಿ, ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ. ಅವರು ಯಡಿಯೂರಪ್ಪ ಆದರೂ ಸರಿಯೇ, ಸಿದ್ದರಾಮಯ್ಯ ಆದರೂ ಸರಿಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರಕ್ಕೆ ಸಲಹೆ ಕೊಟ್ಟರೆ ಕುಮಾರಸ್ವಾಮಿ, ಯಡಿಯೂರಪ್ಪ ಮೇಲೆ ಮೃದು ಧೋರಣೆ ತೋರಿಸುತ್ತಾರೆ. ಬಿಜೆಪಿ ಜತೆ ಹೋಗುತ್ತಾರೆಂದು ಸುದ್ದಿ ಮಾಡುತ್ತಾರೆ. ಐಎಂಎ ಮತ್ತು ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ ಸಂಕಷ್ಟ ಆಗುತ್ತಿದೆ. ಹೀಗಾಗಿ ಬಿಜೆಪಿ ಬಗ್ಗೆ ಧೋರಣೆ ತೊರುತ್ತಿದ್ದಾರೆ ಎನ್ನುತ್ತಾರೆಂದು ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ರಚನೆಯಾದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹಲವು ಮುಖಂಡರು ಚರ್ಚೆ ಮಾಡಿದ್ದರು. ಆದರೆ, ಈಗ ಆಗಿದ್ದೇನು? ನೆರೆ ಸಂತ್ರಸ್ತರ ಗೋಳು ಕೇಳುವುದಕ್ಕೂ ಅವರ ಬಳಿ ಸಮಯವಿಲ್ಲ ಎಂದು ಟೀಕಿಸಿದರು.

ನನಗೆ ಮುಖ್ಯಮಂತ್ರಿ ಪಟ್ಟ ಬೇಕಿರಲಿಲ್ಲ ಎಂದು ಯಡಿಯೂರಪ್ಪಅವರೇ ಹೇಳುವ ಮೂಲಕ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರವೂ ಹೋಗಿ ರಾಷ್ಟ್ರಪತಿ ಆಡಳಿತ ಬಂದರೆ ನೆರೆ ಪರಿಹಾರದ ಕತೆ ಏನು? ಇನ್ನೂ ನಮ್ಮಲ್ಲಿ ಆತ್ಮಹತ್ಯೆ ಆಗಬೇಕಾ? ನೆರೆ ಪೀಡಿತ ಉತ್ತರ ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಮಾತ್ರವೇ ನಾನು ಮಧ್ಯಂತರ ಚುನಾವಣೆ ಬೇಡ ಎನ್ನುತ್ತಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.

ಮೈತ್ರಿ ಸರಕಾರ ಅಸ್ಥಿರಗೊಳಿಸಿದ ಬಳಿಕ ಬಿಜೆಪಿ ಸರಕಾರ ರಚನೆ ಮಾಡಲು ಒಂದು ವಾರ ತೆಗೆದುಕೊಂಡರು. ಕೇಂದ್ರದ ಬಿಜೆಪಿ ನಾಯಕರಿಗೆ ಭಯ ಹುಟ್ಟಿಸಿ ಯಡಿಯೂರಪ್ಪ ಸಿಎಂ ಆದರು ಅನಿಸುತ್ತದೆ. ಮುಖ್ಯಮಂತ್ರಿ ಆದ ಬಳಿಕ ಅವರನ್ನು ಪ್ರಧಾನಿ ಭೇಟಿಗೂ ಅವಕಾಶ ಕೊಡಲಿಲ್ಲ. ಇದನ್ನ ನೋಡಿದರೆ ನಮ್ಮ ಮುಖ್ಯಮಂತ್ರಿಗೆ ಆದ ಅಪಮಾನ, ಜತೆಗೆ ರಾಜ್ಯದ ಜನತೆಗೆ ಆದ ಅಪಮಾನ ಎಂದು ಭಾವಿಸಿದ್ದೇನೆ ಎಂದರು.

ಯಾವ ಪಕ್ಷಕ್ಕೂ ಬಹುಮತ ಬರದು: ನನ್ನ ಅಭಿಪ್ರಾಯದಲ್ಲಿ ಮತ್ತೆ ಚುನಾವಣೆ ಆದರೆ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲ್ಲ. ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತೆ. ಇದು ಬೇಕಾ ಅನ್ನೋದೇ ಪ್ರಶ್ನೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿಯಲ್ಲಿ ಒಳಜಗಳವಿದ್ದರೆ ಒಳಗೆ ಇಟ್ಟುಕೊಳ್ಳಲಿ. ರಾಜಕೀಯ ಸರಿಪಡಿಸಲು ಸಿಎಂಗೆ ಸಮಯ ಸಾಲುತ್ತಿಲ್ಲ. ಇನ್ನು ಜನರ ಸಮಸ್ಯೆ ಬಗೆಹರಿಸಲು ಇವರಿಗೆ ಸಮಯ ಎಲ್ಲಿಂದ ಸಿಗಬೇಕು? ಒಬ್ಬೊಬ್ಬರಿಗೆ ಎರಡೆರಡು ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ. ಯಾರೂ ಜಿಲ್ಲೆಗೆ ಹೋಗಲಿಲ್ಲ. ಕಂದಾಯ ಸಚಿವರು ರಾಜ್ಯದಲ್ಲಿ ಇದ್ದಾರಾ? ಎಲ್ಲಿ ಪ್ರವಾಸ ಮಾಡಿದ್ದಾರೆ? ಜನರ ಸಮಸ್ಯೆಯನ್ನು ಕೇಳಲೇ ಇಲ್ಲ. ಯಡಿಯೂರಪ್ಪ-ಅಶೋಕ್ ನಡುವಿನ ಕೊಂಡಿ ಕಳಚಿದೆ ಅನಿಸುತ್ತಿದೆ. ಮಂತ್ರಿಗಳ್ಯಾರೂ ಸಿಎಂಗೆ ಬೆಂಬಲ ಕೊಡುತ್ತಿಲ್ಲ ಎಂದು ನನಗನಿಸುತ್ತಿದೆ ಎಂದರು.

ಶಿಕಾರಿಪುರ ಸುತ್ತಮುತ್ತ ಕೆರೆ ತುಂಬಿಸಲು ನಾನು ಸಿಎಂ ಆಗಿದ್ದಾಗ 450 ಕೋಟಿ ರೂ. ನೀಡಿದ್ದೆ. ಯಡಿಯೂರಪ್ಪಸಿಎಂ ಆಗುತ್ತಿದ್ದಂತೆ ಇದನ್ನು 850 ಕೋಟಿ ರೂ.ಗೆ ಏರಿಕೆ ಮಾಡಿಕೊಂಡರು. ಇದೇ ಇವರ 100 ದಿನದ ಸಾಧನೆ ಎಂದು ವ್ಯಂಗ್ಯವಾಡಿದರು.

ಕನಕಪುರಕ್ಕೆ ವೈದ್ಯಕೀಯ ಕಾಲೇಜ್ ಸಿದ್ದರಾಮಯ್ಯರ ಕಾಲದಲ್ಲೇ ನಿಗದಿಯಾಗಿತ್ತು. ಅಂದು ಅನುದಾನವಿರಲಿಲ್ಲ. ಕನಕಪುರಕ್ಕೆ ಕೊಟ್ಟ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟರು ಅಂತಾ ಡಿ.ಕೆ ಶಿವಕುಮಾರ್ ಹೇಳುತ್ತಾರೆ. ಕನಕಪುರ ಮತ್ತು ಚಿಕ್ಕಬಳ್ಳಾಪುರ ಎರಡಕ್ಕೂ ಮೆಡಿಕಲ್ ಕಾಲೇಜು ಕೊಡಲಿ, ಬೇಡಾ ಅಂದವರು ಯಾರೂ. ಬಿಜೆಪಿ ಇದೀಗ ಕೇವಲ ಚುನಾವಣಾ ಗಿಮಿಕ್ ಆಗಿ ಚಿಕ್ಕಬಳ್ಳಾಪುರ ದಲ್ಲಿ ಗುದ್ದಲಿ ಪೂಜೆ ಮಾಡಲು ಹೊರಟಿದ್ದಾರೆ. ಹಣ ಎಲ್ಲಿಂದ ತರುತ್ತಾರೆ. ಚುನಾವಣೆ ನಂತರ ಮೆಡಿಕಲ್ ಕಾಲೇಜು ಕೆಲಸ ಮುಂದುವರೆಸುತ್ತಾರ, ಇಲ್ಲಾ ನಿಲ್ಲಿಸುತ್ತಾರಾ ಕಾದು ನೋಡಬೇಕು ಎಂದು ಹೇಳಿದರು.

ಸ್ವತಂತ್ರ ಸ್ಪರ್ಧೆ: ಹದಿನೈದು ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆ ಮಾಡಲಿದೆ. ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಪಕ್ಷದ ಶಾಸಕರು ಮತ್ತು ಪರಿಷತ್ ಸದಸ್ಯರು ಅಸಮಾಧಾನ ಬಗ್ಗೆ ಗೊತ್ತಿಲ್ಲ. ನನ್ನ ಬಳಿ ಬಂದು ಯಾರೂ ಚರ್ಚೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಅಪ್ಪನ ಮಾತು ಕೇಳಿಲ್ಲ: ಕೇವಲ ಒಂದೇ ಬಾರಿ ನಾನು, ನನ್ನ ಅಪ್ಪನ ಮಾತು ಕೇಳಿಲ್ಲ, 2006 ರಲ್ಲಿ ತಂದೆಯ ಮಾತಿಗೆ ವಿರುದ್ಧವಾಗಿ ನಿರ್ಣಯ ಮಾಡಿ ಸರಕಾರ ರಚನೆ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೂ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ತಂದೆಯ ಮಾತನ್ನು ಮೀರಿಲ್ಲ. ಅವರ ಎಲ್ಲ ರಾಜಕೀಯ ನಿರ್ಧಾರಗಳಿಗೆ ನನ್ನ ಸಹಮತ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಸುಳ್ಳು ಮಾಹಿತಿ ನೀಡುತ್ತಿದೆ

ಬಿಜೆಪಿ ಸರಕಾರ ‘ಮೀನುಗಾರರಿಗೆ ಹಾಗೂ ನೇಕಾರರಿಗೆ ಸಾಲಮನ್ನಾ ಮಾಡಿದ್ದೇವೆಂದು ಸರಕಾರ ಹೇಳುತ್ತಿದೆ. ಆದರೆ, ಅದು ಇನ್ನೂ ಸರಕಾರದ ಘೋಷಣೆಯಲ್ಲಿದೆ ಅಷ್ಟೇ. ಆದರೂ, ಜಾಹೀರಾತುಗಳನ್ನು ಮಾತ್ರ ಭರ್ಜರಿಯಾಗಿ ಕೊಡುತ್ತಿದ್ದಾರೆ. ಇವರ ಸಾಧನೆ ಕೇವಲ ಜಾಹೀರಾತಿಗಷ್ಟೇ ಸೀಮಿತವಾಗಿದೆ’

-ಕುಮಾರಸ್ವಾಮಿ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News