ಯಡಿಯೂರಪ್ಪ 77 ವರ್ಷದ ಯುವಕ: ಕೇಂದ್ರ ಸಚಿವ ಸದಾನಂದಗೌಡ

Update: 2019-11-02 14:05 GMT

ಬೆಂಗಳೂರು, ನ.2: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಿಂದ ಯುವಜನ ಸಬಲೀಕರಣ ಯೋಜನೆ ಮಾಡಲಾಗಿದೆ. ಇದರಿಂದಾಗಿ, ವಿದ್ಯಾವಂತ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿ ಸಿಗುತ್ತದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವಜನರನ್ನು ಹೊಂದಿರುವ ದೇಶ ನಮ್ಮದು. ಹೀಗಾಗಿ ಯುವಕರಲ್ಲಿ ವೃತ್ತಿಪರತೆ ವಿಸ್ತಾರ ಮಾಡಲು ಈ ಯೋಜನೆ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಲಾ, ಕಾಲೇಜುಗಳಿಂದ ಹೊರಗಿರುವ ವಿದ್ಯಾರ್ಥಿಗಳಿಗೂ ಈ ಯೋಜನೆಯಿಂದ ಉಪಯೋಗವಾಗಲಿದೆ. ಕೇಂದ್ರ ಸರಕಾರದಿಂದ ಉಚಿತ ತರಬೇತಿ ನೀಡಲಾಗುತ್ತದೆ. ಎಂದರು.

ತರಬೇತಿ ಪಡೆಯುವವರಿಗೆ ಅಪಘಾತ ವಿಮೆ ಕೂಡಾ ನೀಡಲಾಗುತ್ತೆ. ಒಂದು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇದ್ದರೆ ಸಾಕು, ಅವರನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದ್ಯೋಗ ಸೃಷ್ಠಿ ಆಗುತ್ತಿಲ್ಲ ಎಂದು ಪದೇ ಪದೇ ಚರ್ಚೆಯಾಗುತ್ತಿದೆ. ಈ ಕೌಶಲ್ಯ ತರಬೇತಿಯಿಂದಾಗಿ ವಿದ್ಯಾವಂತ ಯುವ ಸಮೂಹಕ್ಕೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಉದ್ಯೋಗಾಕಾಂಕ್ಷಿಗಳು www.naukriforu.com ವೆಬ್‌ಸೈಟ್ ಅನ್ನು ಉಪಯೋಗಿಸಬಹುದು ಎಂದು ಅವರು ಹೇಳಿದರು.

ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ. ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸವಾಲೋ ಅಥವಾ ಇಲ್ಲವೋ ಅಂತಾ ಗೊತ್ತಿಲ್ಲ. ಅದೆಲ್ಲದರ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸವನ್ನು 100 ದಿನಗಳಲ್ಲಿ ಮಾಡಿದ್ದಾರೆ ಎಂದು ಸದಾನಂದಗೌಡ ತಿಳಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಆಗಿರುತ್ತಿದ್ದರೆ ಈ ವೇಳೆಗೆ ಏನು ಮಾಡುತ್ತಿದ್ದರು ಅಂತಾ ನಿಮಗೆಲ್ಲಾ ಗೊತ್ತಿದೆ. ಯಡಿಯೂರಪ್ಪ ಬಹಳ ಮುಂಗೋಪಿ ಅಂತಾ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ, ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯಡಿಯೂರಪ್ಪ 77 ವರ್ಷದ ಯುವಕ, ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ. ಸ್ಥಿತಪ್ರಜ್ಞನಾಗಿ ಯಡಿಯೂರಪ್ಪ ಅವರ ಕೆಲಸಕ್ಕೆ ಶಹಬ್ಬಾಸ್‌ಗಿರಿ ಕೊಡಬೇಕು. ಅವರ ಆಡಳಿತ ನಡೆಸುವ ಶೈಲಿ ಅದ್ಭುತ. ನೂರು ದಿನಗಳ ಈ ಸರಕಾರದ ಆಡಳಿತಕ್ಕೆ 100ಕ್ಕೆ 80 ಅಂಕಗಳನ್ನು ಕೊಡಲೇಬೇಕು ಎಂದು ಸದಾನಂದ ಗೌಡ ಹೇಳಿದರು.

ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದ ಗಂಭೀರ ಸಮಸ್ಯೆ, ನ್ಯಾಯಾಲಯಗಳ ಪ್ರಕರಣಗಳು, ರಾಜಕೀಯ ಮುಖಂಡರ ಆರೋಪ-ಪ್ರತ್ಯಾರೋಪಗಳ ಮಧ್ಯೆಯೂ ಯಡಿಯೂರಪ್ಪ ಕೆಲಸ ಮಾಡಿರುವುದು ಅದ್ಭುತ ಸಾಧನೆ. ಸಣ್ಣಪುಟ್ಟ ರಾಜಕೀಯ ಗೊಂದಲದ ಮಧ್ಯೆಯೂ ಯಡಿಯೂರಪ್ಪ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಯಾಗಿ ಅಪರಾಧ ಮಾಡಿಬಿಟ್ಟೆ ಎಂದು ಹುಬ್ಬಳ್ಳಿಯಲ್ಲಿ ಸಭೆಯೊಂದರಲ್ಲಿ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಇಂತಹ ಭೀಕರ ಪ್ರವಾಹದ ಮಧ್ಯದಲ್ಲಿ ಅಯ್ಯೋ ಎನ್ನುವ ಪರಿಸ್ಥಿತಿ ಅವರಿಗೆ ನಿರ್ಮಾಣ ಆಗಿದೆ. ಅವರು ಮಾತ್ರ ಅಲ್ಲ ನಾವಾಗಿದ್ದರೂ ಅದನ್ನೇ ಮಾಡುತ್ತಿದ್ದೆವು ಎಂದು ಸಮರ್ಥಿಸಿಕೊಂಡರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ, ಶೆಟ್ಟರ್ ಮಜಾ ಮಾಡಲು ಹೋಗುತ್ತಿಲ್ಲ. ಬಂಡವಾಳ ಬಂದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಮುಗಿದ ಮೇಲೆ ಹೋಗುತ್ತೇನೆಂದರೆ ಐದು ವರ್ಷ ಆಗಿರುತ್ತದೆ ಎಂದರು.

ಬಂಡವಾಳ ಸೆಳೆಯಲು ವಿದೇಶಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಯಾರೆಲ್ಲಾ ಸಿಂಗಾಪುರ ಬೇರೆ ಕಡೆ ಹೇಗೆಲ್ಲಾ ಹೋಗಿದ್ದಾರೆ ಅಂತಾ ಗೊತ್ತಿದೆ. ಈಗ ವಿರೋಧ ಮಾಡುವವರು ನಾಡಿದ್ದು ಶೆಟ್ಟರ್ ಏನೂ ಮಾಡಿಲ್ಲ ಅಂತಾ ಹೇಳ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News