ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸದ್ಯ ಕಾಶ್ಮೀರ ಕುರಿತು ಚರ್ಚಿಸುವುದಿಲ್ಲ: ಅಧ್ಯಕ್ಷೆ

Update: 2019-11-02 14:07 GMT

ವಿಶ್ವಸಂಸ್ಥೆ, ನ.2: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ತಿಂಗಳಲ್ಲಿ ಕಾಶ್ಮೀರ ವಿಷಯದ ಕುರಿತು ಯಾವುದೇ ಚರ್ಚೆಯನ್ನು ನಡೆಸುವುದಿಲ್ಲ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ವಿಶ್ವಸಂಸ್ಥೆಗೆ ಬ್ರಿಟನ್‌ನ ಕಾಯಂ ಪ್ರತಿನಿಧಿ ಹಾಗೂ ನವೆಂಬರ್ ತಿಂಗಳಿಗೆ ಭದ್ರತಾ ಮಂಡಳಿಯ ಅಧ್ಯಕ್ಷೆಯಾಗಿರುವ ಕರೆನ್ ಪಿಯರ್ಸ್ ಅವರು,ಜಗತ್ತಿನಲ್ಲಿ ಹಲವಾರು ವಿಷಯಗಳು ನಡೆಯುತ್ತಿವೆ ಎಂದು ಒತ್ತಿ ಹೇಳಿದರು. ಬ್ರಿಟನ್ ಶುಕ್ರವಾರ ನವೆಂಬರ್ ತಿಂಗಳಿಗೆ 15 ರಾಷ್ಟ್ರಗಳ ಭದ್ರತಾಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದೆ.

ಬ್ರಿಟನ್ ಅಧ್ಯಕ್ಷತೆಯ ಅವಧಿಯಲ್ಲಿ ಕಾಶ್ಮೀರ ಕುರಿತು ಚರ್ಚೆ ನಿಗದಿಯಾಗಿದೆಯೇ ಎಂಬ ಸಿರಿಯಾದ ಸುದ್ದಿಗಾರ ನೋರ್ವನ ಪ್ರಶ್ನೆಗೆ ಪಿಯರ್ಸ್, ಇಲ್ಲ, ಕಾಶ್ಮೀರವು ನಮ್ಮ ಕಾರ್ಯಸೂಚಿಯಲ್ಲಿಲ್ಲ ಎಂದು ಉತ್ತರಿಸಿದರು.

ಜಗತ್ತಿನಲ್ಲಿ ಹಲವಾರು ಸಂಗತಿಗಳು ನಡೆಯುತ್ತಲೇ ಇರುತ್ತವೆ ಮತ್ತು ಅಧ್ಯಕ್ಷರು ಮಾಮೂಲಾಗಿ ಚರ್ಚೆಯಾಗದ ಕೆಲವು ವಿಷಯಗಳನ್ನು ಆಯ್ದುಕೊಳ್ಳುತ್ತಾರೆ ಎಂದ ಅವರು, ಭದ್ರತಾ ಮಂಡಳಿಯು ಇತ್ತೀಚಿಗೆ ಕಾಶ್ಮೀರ ಕುರಿತು ಚರ್ಚಿಸಿರುವುದರಿಂದ ನಾವು ಅದನ್ನು ಆಯ್ದುಕೊಂಡಿಲ್ಲ ಮತ್ತು ಸಭೆಯೊಂದನ್ನು ಕರೆಯುವಂತೆ ಭದ್ರತಾ ಮಂಡಳಿಯ ಇತರ ಯಾವುದೇ ಸದಸ್ಯ ರಾಷ್ಟ್ರವು ಕೋರಿಕೊಂಡಿಲ್ಲ ಎಂದು ತಿಳಿಸಿದರು.

ಕಾಶ್ಮೀರ ಕುರಿತು ಸಭೆಯನ್ನು ಕರೆಯಬೇಕೆಂದು ಪಾಕಿಸ್ತಾನ ಮತ್ತು ಚೀನಾ ಕೋರಿದ್ದ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯು ಆಗಸ್ಟ್‌ನಲ್ಲಿ ಮುಚ್ಚಿದ ಕೊಠಡಿಯಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಭಾರತ ಸರಕಾರದ ಕ್ರಮದ ಕುರಿತು ಚರ್ಚಿಸಿತ್ತು. ಚರ್ಚೆಯ ಬಳಿ ಭದ್ರತಾ ಮಂಡಳಿಯು ಯಾವುದೇ ಹೇಳಿಕೆಯನ್ನು ಹೊರಡಿಸಿರಲಿಲ್ಲ ಮತ್ತು ಇದು ಕಾಶ್ಮೀರ ವಿಷಯದ ಜಾಗತೀಕರಣದ ಪಾಕಿಸ್ತಾನದ ಪ್ರಯತ್ನಗಳಿಗೆ ತಣ್ಣೀರೆರಚಿತ್ತು. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಹೆಚ್ಚಿನ ಸದಸ್ಯ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಕಾಶ್ಮೀರವು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ವಿಷಯವಾಗಿದೆಯೆಂದು ಭಾರತವೂ ಸ್ಪಷ್ಟಪಡಿಸಿದ್ದು, ಮೂರನೇ ಪಕ್ಷದ ಮಧ್ಯಸ್ಥಿಕೆಗೆ ಅವಕಾಶವನ್ನು ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News