ಆರ್‌ಸಿಇಪಿ ಒಪ್ಪಂದಕ್ಕಾಗಿ ಭಾರತ ಲಾಭದಾಯಕ, ಸಮಂಜಸ ಪ್ರಸ್ತಾವಗಳನ್ನು ಮಂಡಿಸಿದೆ: ಪ್ರಧಾನಿ

Update: 2019-11-02 14:09 GMT

ಬ್ಯಾಂಕಾಕ್, ನ.2: ಸುದೀರ್ಘ ಸಮಯದಿಂದ ಬಾಕಿಯುಳಿದಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ವನ್ನು ಅಂತಿಮಗೊಳಿಸಲು ನಡೆಯುತ್ತಿರುವ ಮಾತುಕತೆಗಳು ಕೊನೆಯ ಘಟ್ಟವನ್ನು ತಲುಪಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ಸ್ಪಷ್ಟವಾದ ರೀತಿಯಲ್ಲಿ ಸಮಂಜಸವಾದ ಪ್ರಸ್ತಾವಗಳನ್ನು ಮುಂದಿರಿಸಿದೆ ಮತ್ತು ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಪ್ರಾಮಾಣಿಕವಾಗಿ ಮಾತುಕತೆಗಳಲ್ಲಿ ತೊಡಗಿಕೊಂಡಿದೆ ಎಂದು ಹೇಳಿದ್ದಾರೆ.

ಪರಸ್ಪರ ಲಾಭದಾಯಕವಾದ ಆರ್‌ಸಿಇಪಿಯು ಭಾರತದ ಮತ್ತು ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಪೂರಕವಾಗಿರುತ್ತದೆ ಎನ್ನುವುದು ನಮ್ಮ ಸ್ಪಷ್ಟ ನಿಲುವಾಗಿದೆ ಎಂದು ಮೋದಿ ‘ ಬ್ಯಾಂಕಾಕ್ ಪೋಸ್ಟ್’ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಥಾಯ್ ಲ್ಯಾಂಡ್‌ನಲ್ಲಿ ಸೋಮವಾರ ನಡೆಯಲಿರುವ ಶೃಂಗಸಭೆಯಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಬೀಳುವಂತಾಗಲು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ(ಆಸಿಯಾನ್)ದ 10 ರಾಷ್ಟ್ರಗಳು ಹಾಗೂ ಭಾರತ, ಚೀನಾ, ಜಪಾನ್, ದ.ಕೊರಿಯಾ,ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ಸೇರಿದಂತೆ ಆರು ಇತರ ರಾಷ್ಟ್ರಗಳು ತೀವ್ರ ಮಾತುಕತೆಗಳಲ್ಲಿ ತೊಡಗಿಕೊಂಡಿವೆ.

ಅಂತಿಮಗೊಳ್ಳುವಲ್ಲಿ ಯಶಸ್ವಿಯಾದರೆ ಆರ್‌ಸಿಇಪಿ ಒಪ್ಪಂದವು ವಿಶ್ವದ ಅತ್ಯಂತ ದೊಡ್ಡ ಮುಕ್ತ ವ್ಯಾಪಾರ ವಲಯವನ್ನು ಸೃಷ್ಟಿಸಲಿದೆ. ಈ 16 ರಾಷ್ಟ್ರಗಳಲ್ಲಿ ವಿಶ್ವದ ಜನಸಂಖ್ಯೆಯ ಸುಮಾರು ಅರ್ಧದಷ್ಟು,ಅಂದರೆ 360 ಕೋಟಿ ಜನರು ವಾಸಿಸುತ್ತಿದ್ದಾರೆ.

  ಆರ್‌ಸಿಇಪಿ ಮಾತುಕತೆಗಳ ಸಮಗ್ರ ಮತ್ತು ಸಮತೋಲಿತ ಫಲಿತಾಂಶಕ್ಕೆ ಭಾರತವು ಬದ್ಧವಾಗಿದೆ. ಮಾತುಕತೆಯ ಯಶಸ್ವಿ ಮುಕ್ತಾಯವು ಅದರಲ್ಲಿ ಭಾಗಿಯಾಗಿರುವ ಎಲ್ಲ ರಾಷ್ಟ್ರಗಳ ಹಿತಾಸಕ್ತಿಯನ್ನು ಒಳಗೊಂಡಿರುತ್ತದೆ. ಆದ್ದರಿಂದ ಭಾರತವು ಸರಕುಗಳು,ಸೇವೆಗಳು ಮತ್ತು ಹೂಡಿಕೆಗಳಲ್ಲಿ ಮತ್ತು ಪ್ರತಿ ಕ್ಷೇತ್ರದಲ್ಲಿಯೂ ಸಮತೋಲನವನ್ನು ಬಯಸುತ್ತದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

ನ.2ರಿಂದ 4ರವರೆಗೆ ಥಾಯ್ ಲ್ಯಾಂಡ್‌ಗೆ ತನ್ನ ಅಧಿಕೃತ ಭೇಟಿಯಲ್ಲಿ ಮೋದಿ ಅವರು ಭಾರತ-ಆಸಿಯಾನ್ ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಆರ್‌ಸಿಇಪಿ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ.

2012, ನವೆಂಬರ್‌ನಲ್ಲಿ ಕಾಂಬೋಡಿಯಾದ ನಾಮ್ ಪೆನ್‌ನಲ್ಲಿ ನಡೆದಿದ್ದ 21ನೇ ಆಸಿಯಾನ್ ಶೃಂಗಸಭೆಯಲ್ಲಿ ಆರ್‌ಸಿಇಪಿ ಮಾತುಕತೆಗಳನ್ನು ಆಸಿಯಾನ್ ರಾಷ್ಟ್ರಗಳು ಮತ್ತು ಇತರ ಆರು ರಾಷ್ಟ್ರಗಳು ಆರಂಭಿಸಿದ್ದವು. ಆಸಿಯಾನ್ ಸದಸ್ಯ ರಾಷ್ಟ್ರಗಳು ಮತ್ತು ಅದರ ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರರ ನಡುವೆ ಆಧುನಿಕ,ಸಮಗ್ರ,ಉನ್ನತ ಗುಣಮಟ್ಟದ ಮತ್ತು ಪರಸ್ಪರ ಲಾಭದಾಯಕ ಆರ್ಥಿಕ ಸಹಭಾಗಿತ್ವ ಒಪ್ಪಂದವನ್ನು ಸಾಧಿಸುವುದು ಈ ಮಾತುಕತೆಗಳ ಉದ್ದೇಶವಾಗಿತ್ತು.

ಆಸಿಯಾನ್‌ನೊಂದಿಗೆ ಭಾರತದ ಸಂಬಂಧಗಳು ಕುರಿತಂತೆ ಮೋದಿ,ಅದರೊಂದಿಗೆ ತೊಡಗುವಿಕೆಯು ತನ್ನ ಸರಕಾರದ ಆ್ಯಕ್ಟ್ ಈಸ್ಟ್ ನೀತಿ ಮತ್ತು ಕಾರ್ಯತಂತ್ರದ ನಿರ್ಣಾಯಕ ಅಂಶವಾಗಿತ್ತು ಮತ್ತು ನಿರ್ಣಾಯಕ ಅಂಶವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News