ಗ್ರಾಮಗಳ ಅಭಿವೃದ್ಧಿ ದೇವರ ಸೇವೆಗಿಂತ ಶ್ರೇಷ್ಠ: ಸಚಿವ ಕೆ.ಎಸ್.ಈಶ್ವರಪ್ಪ

Update: 2019-11-02 17:27 GMT

ಬೆಂಗಳೂರು, ನ.2: ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವುದೇ ದೇವರ ಸೇವೆಗಿಂತ ಶ್ರೇಷ್ಠವಾದ ಸೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಜಿಕೆವಿಕೆ ಆವರಣದಲ್ಲಿರುವ ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಚಿಂತನ-ಮಂಥನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಎರಡನೇ ಶಕ್ತಿಯೇ ಗ್ರಾಮ ಪಂಚಾಯತ್ ಆಗಿದೆ. ನಾನು ಕೆಲವು ಗ್ರಾಮಪಂಚಾಯತ್‌ಗಳಿಂದ ವರದಿ ತರಿಸಿಕೊಂಡಿದ್ದೇನೆ, ಭೇಟಿ ನೀಡಿದ್ದೇನೆ. ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದ್ದಾರೆ. ಗ್ರಾಮಗಳಲ್ಲಿನ ಘನತ್ಯಾಜ್ಯ ವಿಲೇವಾರಿ ಮಾಡುವಲ್ಲಿ, ಶಾಲಾ ಕಾಲೇಜುಗಳಲ್ಲಿ ಸ್ವಚ್ಛಭಾರತ್ ಅಭಿಯಾನ ಕುರಿತ ಕಾರ್ಯಕ್ರಮಗಳು, ತೆರಿಗೆ ಸಂಗ್ರಹಣೆ ಹೀಗೆ ಉತ್ತಮ ಕೆಲಸ ಮಾಡಿರುವವರನ್ನು ಗುರುತಿಸುವ ಇಂತಹ ಕಾರ್ಯಕ್ರಮ ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು. ಮುಂಬರುವ ಗ್ರಾಮಪಂಚಾಯತ್ ಚುನಾವಣೆ ವೇಳೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರಿಗಳು ಇನ್ನು ಹೆಚ್ಚು ಶ್ರಮಿಸಬೇಕು. ಪ್ರತಿಯೊಂದು ಗ್ರಾಮವು ಬಯಲು ಬಹಿರ್ದೆಸೆ ಮುಕ್ತವಾಗಿ ಯಾವೊಬ್ಬ ಹೆಣ್ಣುಮಗಳು ಬಯಲು ಶೌಚಾಲಯಕ್ಕೆ ಹೋಗದಂತೆ ಶೌಚಾಲಯಗಳ ನಿರ್ಮಾಣವಾಗಬೇಕೆಂದು ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾ ದೇವಿ ಮಾತನಾಡಿ, ಸರಕಾರದ ಯಾವುದೇ ಯೋಜನೆ ಜನರಿಗೆ ತಲುಪುವುದು ಗ್ರಾಮಪಂಚಾಯತ್‌ಗಳ ಮೂಲಕ. ರಾಷ್ಟ್ರ, ರಾಜ್ಯ ನಿರ್ಮಾಣದಲ್ಲಿ ಗ್ರಾಮಪಂಚಾಯತ್‌ಗಳ ಜವಾಬ್ದಾರಿ ಹೆಚ್ಚಿದೆ ಎಂದರು.

ಪಂಚಾಯತ್ ರಾಜ್ ಪ್ರಾಧಾನ ಕಾರ್ಯದರ್ಶಿ ಉಮಾಮಹದೇವನ್ ಮಾತನಾಡಿ, ಇಡೀ ದೇಶದಲ್ಲಿ ನಮ್ಮ ರಾಜ್ಯದ ಗ್ರಾಮಪಂಚಾಯತ್‌ಗಳು ಉತ್ತಮ ಕಾರ್ಯನಿರ್ವಸುತ್ತಿರುವುದು ಹೆಮ್ಮೆಯ ವಿಷಯ. ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಕೇಂದ್ರ ಹಾಗೂ ರಾಜ್ಯಗಳು ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇಂತಹಾ ಕಾರ್ಯಕ್ರಮಗಳು ಮಹತ್ವದ್ದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News