ಉಪಚುನಾವಣಾ ಅಖಾಡಕ್ಕೆ ಬನ್ನಿ: ಮಾಜಿ ಸಿಎಂಗೆ ಯಡಿಯೂರಪ್ಪ ಸವಾಲು

Update: 2019-11-04 12:48 GMT

ಬೆಂಗಳೂರು, ನ. 4: ‘ನನ್ನ ವಿರುದ್ಧ ಅಪಪ್ರಚಾರ ಮಾಡುವ ಬದಲು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೀವು ಬಿಜೆಪಿ ವಿರುದ್ಧ ಏನೇ ಆರೋಪ ಮಾಡಿದರೂ ರಾಜ್ಯದ ಜನತೆ ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ. ಅಧಿಕಾರ ಕಳೆದುಕೊಂಡು ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದೀರೀ? ಅದರ ಬದಲು ಉಪಚುನಾವಣಾ ಅಖಾಡಕ್ಕೆ ಬನ್ನಿ’ ಎಂದು ಪಂಥಾಹ್ವಾನ ನೀಡಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ವಿಪಕ್ಷ ಸ್ಥಾನ ಅವರಿಗೆ ಖಾಯಂ. ಇನ್ನೂ ಮೂರುವರೆ ವರ್ಷ ಅವರು ಅದೇ ಸ್ಥಾನದಲ್ಲಿ ಕೂರಬೇಕಾಗುತ್ತದೆಂಬ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಮೂರ್ಖತನ ಎಂದರು.

ನಿಮ್ಮ ನಾಯಕತ್ವದಲ್ಲೇ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದು, ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ನಿಮ್ಮಂಥವರನ್ನು ವಿಪಕ್ಷ ನಾಯಕರನ್ನಾಗಿ ಹೇಗೆ ಮಾಡಿದರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೊನೆ ಮೊಳೆ ಹೊಡೆಯುವುದು ನೀವೇ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದರು.

ಅನರ್ಹರು ಏಕೆ ರಾಜೀನಾಮೆ ನೀಡಿದ್ದಾರೆಂಬುದು ಎಲ್ಲರಿಗೂ ಗೊತ್ತು. ಅವರು ನಿಯಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದನ್ನು ನೀವು ಅಂಗೀಕರಿಸಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಪಿತೂರಿ ನಡೆಸಿ ರಾಜೀನಾಮೆ ಪತ್ರವನ್ನೇ ಅಂಗೀಕರಿಸಲಿಲ್ಲ ಎಂದು ಟೀಕಿಸಿದರು.

ನಾನು ಮಾತನಾಡಿದ್ದು ನನಗೆ ಗೊತ್ತು: ನಾನು ವಿಡಿಯೋದಲ್ಲಿ ಏನು ಮಾತನಾಡಿದ್ದೀನಿ ಎಂಬುದು ನನಗೆ ಗೊತ್ತು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿರುವುದನ್ನು ಯಾರು ಚಿತ್ರೀಕರಿಸಿದರು ಎಂಬುದು ಗೊತ್ತಿಲ್ಲ. ನನ್ನ ಹೇಳಿಕೆಯಿಂದ ಕೋರ್ಟ್ ನಲ್ಲಿ ಅನರ್ಹರಿಗೆ ಯಾವುದೇ ಹಿನ್ನಡೆ ಉಂಟಾಗುವುದಿಲ್ಲ ಎಂದು ಬಿಎಸ್‌ವೈ ಸ್ಪಷ್ಟಣೆ ನೀಡಿದರು.

‘ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ತಮ್ಮದೇ ಆದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಗಮನಕ್ಕೂ ತಂದಿದ್ದಾರೆ. ಇನ್ನೇನು ತೀರ್ಪು ಪ್ರಕಟವಾಗಲಿದೆ ಎಂಬ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ’

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News