ಟ್ವಿಟರ್ ನಲ್ಲೂ ಜಯ್ ಶಾ ಜಾದೂ!

Update: 2019-11-06 11:09 GMT
PTI

ಹೊಸದಿಲ್ಲಿ, ನ.6: ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ 2017ರಲ್ಲೊಮ್ಮೆ ತಮ್ಮ ಒಡೆತನದ ಕಂಪೆನಿಯ ಆದಾಯ 2015-16ರ ಅವಧಿಯಲ್ಲಿ  16,000 ಪಟ್ಟು ಹೆಚ್ಚಿದ ಕುರಿತಾಗಿ ಸುದ್ದಿಯಲ್ಲಿದ್ದರು.

ಈಗ ಮತ್ತೊಮ್ಮೆ ಅವರು ತಮ್ಮ ಟ್ವಿಟರ್ ಖಾತೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಟ್ವಿಟರ್ ಸೇರಿದ ಜಯ್ ಶಾ ಅವರಿಗೆ ನವೆಂಬರ್ 4ರ ತನಕ ಕೇವಲ 27 ಮಂದಿ ಫಾಲೋವರ್ಸ್ ಇದ್ದರು. ಅಷ್ಟೇ ಏಕೆ ಅವರು ಒಂದು ಬಾರಿಯೂ ಟ್ವೀಟ್ ಮಾಡಿರಲಿಲ್ಲ. ಆದರೆ ನವೆಂಬರ್ 4ರ ಸಂಜೆಯಿಂದ ಹಿಡಿದು ನವೆಂಬರ್ 6ರ ಬೆಳಗ್ಗಿನ ತನಕ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 27ರಿಂದ 10,000ಕ್ಕೆ ಜಿಗಿದು ಫಾಲೋವರ್ಸ್ ಸಂಖ್ಯೆ 37,000 ಪಟ್ಟು ಅಧಿಕಗೊಂಡಿದೆ.

ಅಷ್ಟೇ ಏಕೆ  ಜಯ್ ಶಾ ಅವರ ಟ್ವಿಟರ್ ಖಾತೆ ಆರಂಭಗೊಂಡಂದಿನಿಂದ 'ಬ್ಲೂ ಟಿಕ್' (ವೆರಿಫೈಡ್) ಹೊಂದಿದೆ ಎಂದು ಹಲವರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಹಾಗೂ ಇದು ಹೇಗೆ ಸಾಧ್ಯವಾಯಿತು ಎಂದೂ ಪ್ರಶ್ನಿಸುತ್ತಿದ್ದಾರೆ.

ಇಲ್ಲೊಂದು ವಿಚಾರವಿದೆ, ಒಂದು ವಾರದ ಹಿಂದೆಯಷ್ಟೇ ಟ್ವಿಟರ್ ಕೆಲ ದಲಿತ ಚಿಂತಕರು ಹಾಗೂ ಬುದ್ಧಿಜೀವಿಗಳಿಗೆ ನಿರ್ಬಂಧ ಹೇರಿ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿತ್ತು. ಅವರಲ್ಲಿ ಪತ್ರಕರ್ತ ದಿಲೀಪ್ ಮಂಡಲ್, ದಿಲ್ಲಿ ಹಿಂದು ಕಾಲೇಜಿನ ಪ್ರೊಫೆಸರ್ ರತನ್ ಲಾಲ್, ಟ್ರೈಬಲ್ ಆರ್ಮಿ ಸ್ಥಾಪಕ ಹಂಸರಾಜ್ ಮೀನಾ ಅವರ ಖಾತೆಗಳು ಸೇರಿದ್ದವು. ದಿಲೀಪ್ ಅವರ ಟ್ವಿಟರ್ ಖಾತೆಯನ್ನು ಈಗ ಮರುಸ್ಥಾಪಿಸಲಾಗಿದೆ.

ಆದರೆ ನಿರ್ಬಂಧಗಳ ಹಿನ್ನೆಲೆಯಲ್ಲಿ ಹಲವರು ಟ್ವಿಟರ್ ವಿರುದ್ಧ ಅಭಿಯಾನ ಕೈಗೊಂಡು ಅದು ಜಾತೀಯತೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿ  ಟೀಕಿಸಿದ್ದರು. ಕೆಲವೊಂದು ಹ್ಯಾಶ್ ಟ್ಯಾಗ್‌ ಗಳಾದ #CasteistTwitter ಹಾಗೂ #BramhanicalTwitter ಟ್ರೆಂಡಿಂಗ್ ಆಗಿತ್ತು.

ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವೊಂದು ನಾಯಕರಿಗೆ ಸಾವಿರಾರು ಫಾಲೋವರ್ಸ್ ಇದ್ದರೂ ಅವರ ಖಾತೆಗಳಿಗೆ ಬ್ಲೂ ಟಿಕ್ (ವೆರಿಫೈಡ್) ಒದಗಿಸಲಾಗಿಲ್ಲ. ಬದಲಾಗಿ ಬೆರಳೆಣಿಕೆಯಷ್ಟು ಫಾಲೋವರ್ಸ್ ಇರುವ ಕೆಲ ಮೇಲ್ಜಾತಿಯವರ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗುತ್ತಿದೆ ಎಂದೂ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News