ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆಗೆ ನಿರ್ಧಾರ: ಸಿಎಂ ಯಡಿಯೂರಪ್ಪ

Update: 2019-11-06 15:24 GMT

ಬೆಂಗಳೂರು, ನ.6: ಸಾರ್ವಜನಿಕರ ಸಾರಿಗೆ ತುಟ್ಟಿಯಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಆದುದರಿಂದ, ಬಿಎಂಟಿಸಿಗೆ ಸರಕಾರದಿಂದ ಆರ್ಥಿಕ ನೆರವು ನೀಡಿ, ಬಸ್ ಪ್ರಯಾಣ ದರ ಇಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಮತ್ತು ಸಂಚಾರ ದಟ್ಟಣೆ ನಿವಾರಿಸಿ ವಾಯುಮಾಲಿನ್ಯ ತಗ್ಗಿಸುವ ಕುರಿತು ಪರಿಣಿತರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಬಸ್ ಪ್ರಯಾಣ ದರ ಇಳಿಕೆಯಿಂದಾಗಿ ಈ ವರ್ಗದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಪ್ರೇರೇಪಿಸಲಾಗುವುದು. ಖಾಸಗಿ ವಾಹನಗಳ ಓಡಾಟ ತಪ್ಪುವುದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೇ, ಬೆಂಗಳೂರು ನಗರವನ್ನು ಆಹ್ಲಾದಕರ ವಾತಾವರಣವುಳ್ಳ ನಗರವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಬಿಎಂಟಿಸಿ ಬಳಿ 6,500 ಬಸ್ಸುಗಳಿದ್ದು, ಹೆಚ್ಚುವರಿಯಾಗಿ 6 ಸಾವಿರ ಬಸ್ಸುಗಳನ್ನು ಸೇರ್ಪಡೆ ಮಾಡಲಾಗುವುದು. ಹೊಸ ಬಸ್ಸುಗಳನ್ನು ಖರೀದಿಸುವ ಬದಲು ಒಪ್ಪಂದದ ಮೇರೆಗೆ ಬಸ್ ಉತ್ಪಾದಿಸುವ ಕಂಪೆನಿಗಳಿಂದ ನೇರವಾಗಿ ಬಾಡಿಗೆ ಮೇಲೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರು ಮೊಬಿಲಿಟಿ ಮ್ಯಾನೇಜ್‌ಮೆಂಟ್ ಅಥಾರಿಟಿ(ಬಿಎಂಎಂಎ) ಸ್ಥಾಪಿಸಿ ಸಂಯೋಜಿತ ಸಂಚಾರ ನಿರ್ವಹಣೆ ಕೈಗೊಳ್ಳಲಾಗುವುದು. ಹೊಸ ಬಸ್ಸುಗಳಲ್ಲಿ ಶೇ.50ರಷ್ಟು ಇಲೆಕ್ಟ್ರಿಕ್ ಬಸ್ಸುಗಳನ್ನು ಬಿಎಂಟಿಸಿಗೆ ನೀಡಲಾಗುವುದು. ಇವು ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸಲಿವೆ. ಇದರಿಂದ ಶೇ.50ರಷ್ಟು ಮಾಲಿನ್ಯ ಪ್ರಮಾಣ ತಡೆಗಟ್ಟಬಹುದು ಎಂದು ಯಡಿಯೂರಪ್ಪ ತಿಳಿಸಿದರು.

ಅತೀ ಹೆಚ್ಚು ವಾಹನ ಸಂಚಾರ ಇರುವ ಕೆ.ಆರ್.ಪುರ, ಹಳೆ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ ಇತ್ಯಾದಿ ನಗರದ ಅತ್ಯಂತ ದಟ್ಟಣೆಯುಳ್ಳ 12 ಕಾರಿಡಾರ್‌ಗಳನ್ನು ಗುರುತಿಸಲಾಗಿದ್ದು, ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಹಾಗೂ ಸೈಕಲ್ ಲೇನ್‌ಗಳನ್ನು ಸ್ಥಾಪಿಸಿ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮೆಟ್ರೋ 2ನೇ ಹಂತ 20121ರ ಅಕ್ಟೋಬರ್-ಡಿಸೆಂಬರ್ ವೇಳೆಗೆ, ಹೊರ ವರ್ತುಲ ರಸ್ತೆ-ವಿಮಾನ ನಿಲ್ದಾಣದ ಮಾರ್ಗದ ಮೆಟ್ರೋ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸಲಾಗುವುದು ಹಾಗೂ 2025ರ ವೇಳೆಗೆ ಬೆಂಗಳೂರು ಮೆಟ್ರೋ ವಿಸ್ತೀರ್ಣವನ್ನು 300 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

2022ರ ವೇಳೆಗೆ ಪೂರ್ವ ದಿಕ್ಕಿನ ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ, ಐಟಿಪಿಎಲ್ ಪ್ರದೇಶದ ಐಟಿ ಹಬ್ ಜೊತೆಗೆ ಪಶ್ಚಿಮದ ಯಶವಂತಪುರ, ಪೀಣ್ಯ ಕೈಗಾರಿಕಾ ಹಬ್‌ಗೆ ಸಂಯೋಜಿಸಲಾಗುವುದು. 2022ರ ವೇಳೆಗೆ ಫೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮೆಟ್ರೋ 3ನೇ ಹಂತವನ್ನು ಹೊಸಕೋಟೆ ಕ್ರಾಸ್‌ವರೆಗೆ ವಿಸ್ತರಿಸಲು (ವೈಟ್‌ಫೀಲ್ಡ್-ಸರ್ಜಾಪುರ ಮಾರ್ಗದಲ್ಲಿ) ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆ: ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ಕಸ ನಿರ್ವಹಣೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲಾಗುವುದು. ಕಸ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸುವುದಲ್ಲದೇ, ಈ ವಾಹನಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಘನತ್ಯಾಜ್ಯ ನಿರ್ವಹಣೆ ಕಾರ್ಯದ ಉಸ್ತುವಾರಿಗೆ 20 ಇಂಜಿನಿಯರ್‌ಗಳನ್ನು ತಕ್ಷಣವೇ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ, ಹೆಚ್ಚುವರಿ ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು. ಪ್ರತಿ ದಿನ ಬೆಂಗಳೂರಿನಲ್ಲಿ 4500 ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದ್ದು, 2500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಆದುದರಿಂದ, ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಅಗತ್ಯವಾದ ಹೆಚ್ಚುವರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಕೆರೆಗಳ ನಿರ್ವಹಣೆ: ಬೆಂಗಳೂರು ನಗರದಲ್ಲಿರುವ ಎಲ್ಲ ಕೆರೆಗಳ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಲು ನಿರ್ಧರಿಸಲಾಗಿದೆ. ಎಲ್ಲ ಕೆರೆಗಳ ಏರಿಗಳನ್ನು ಭದ್ರಪಡಿಸಿ, ವಾಕಿಂಗ್ ಪಾತ್ ನಿರ್ಮಿಸಿ, ಸೌಂದರ್ಯವರ್ಧನೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೇ, ಕೆರೆ ಪ್ರದೇಶದಲ್ಲಿ ಬಡವರು ಮನೆಕಟ್ಟಿದ್ದರೆ ಅವುಗಳನ್ನು ಬಿಟ್ಟು ಶ್ರೀಮಂತರು ಮತ್ತು ಬಿಲ್ಡರ್‌ಗಳು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News