‘ಆರ್ಥಿಕ ಗಣತಿ’ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

Update: 2019-11-06 17:44 GMT

ಬೆಂಗಳೂರು, ನ. 6: ದೇಶದ ಆರ್ಥಿಕ ಸ್ಥಿತಿಗತಿಯ ವಾಸ್ತವತೆಯನ್ನು ತಿಳಿಯಲು ಹಾಗೂ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆರ್ಥಿಕ ಗಣತಿ ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಸಹಯೋಗದಲ್ಲಿ ರಾಜ್ಯ ಸರಕಾರದ ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಏಳನೆ ಆರ್ಥಿಕ ಗಣತಿಯ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಆರ್ಥಿಕ ಗಣತಿಯಿಂದ ಸರಕಾರಿ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ- ಫಲಿತಾಂಶವೇ ಸಹಕಾರಿ. ಪ್ರಥಮ ಬಾರಿಗೆ ಏಳನೆ ಆರ್ಥಿಕ ಗಣತಿ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ಗಣತಿಯಿಂದ ಮಾಹಿತಿಯನ್ನು ಶೀಘ್ರವಾಗಿ ಸಂಗ್ರಹಿಸಿ ವರದಿ ತಯಾರಿಸಲು ಅನುಕೂಲವಾಗುತ್ತದೆ. ಈ ಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ ಎಂದ ಅವರು, ರಾಜ್ಯದ ವಿವಿಧ ಪ್ರದೇಶ ಹಾಗೂ ವಲಯಗಳಲ್ಲಿ ಉದ್ಯಮಗಳು ಯಾವ ರೀತಿ ಆರ್ಥಿಕ ಚಟುವಟಿಕೆ ಕೈಗೊಳ್ಳುತ್ತವೆ ಎಂಬ ವಿವರ ದೊರೆಯಲಿದೆ ಎಂದರು.

ಗಣತಿ ವದಿಯನ್ನು ಆಧರಿಸಿ ನೀತಿ-ನಿರೂಪಣೆ ರಚಿಸಲು ಸಹಕಾರಿ. ಗಣತಿದಾರರು ಮನೆ-ಮನೆಗೆ ತೆರಳಿ ಮಾಹಿತಿ ಕಲೆ ಹಾಕುವ ವೇಳೆ ಜನರ ಮನವೊಲಿಸಿ ನಿಖರ ಮಾಹಿತಿ ಸಂಗ್ರಹಿಸಬೇಕು. ಗಣತಿದಾರರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ರಾಜ್ಯಾದ್ಯಂತ ಆರ್ಥಿಕ ಗಣತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ಈ ಗಣತಿ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿ, ಆರ್ಥಿಕ ಗಣತಿಯಿಂದ ದೊರೆಯುವ ಅಂಕಿ-ಅಂಶಗಳು ರಾಜ್ಯದ ಯೋಜನೆ ರೂಪಿಸಲು ಸಹಕಾರಿ. ಹೀಗಾಗಿ ಎಲ್ಲ ಇಲಾಖೆಗಳು ಗಣತಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಮಾತನಾಡಿ, ಏಳನೆ ಆರ್ಥಿಕ ಗಣತಿಯು ನ.15ರಿಂದ 2020ರ ಮಾರ್ಚ್ ವರೆಗೆ ನಡೆಲಿದೆ. ನಗರ ಪ್ರದೇಶದಲ್ಲಿ 54, 96,473, ಗ್ರಾಮೀಣ ಪ್ರದೇಶದಲ್ಲಿ 82,24,143 ಕುಟುಂಬಗಳನ್ನು ಭೇಟಿ ಮಾಡಲಿದ್ದು, ಮಾಹಿತಿ ಸಂಗ್ರಹಿಸಲಾಗುತ್ತದೆ.

ಗಣತಿ ಕಾರ್ಯಕ್ಕೆ ನಗರ ಪ್ರದೇಶದಲ್ಲಿ 87,020, ಗ್ರಾಮೀಣ ಪ್ರದೇಶದಲ್ಲಿ 30,105 ಗಣತಿದಾರರು ಮತ್ತು ಮೇಲ್ವಿಚಾರಕರ ಅಗತ್ಯವಿದೆ. ಎರಡನೆ ಹಂತದ ಮೇಲ್ವಿಚಾರಣೆ ಕೇಂದ್ರ ಸಾಂಖಿಕ ಕಚೇರಿಯ 70 ಅಧಿಕಾರಿಗಳು ಮತ್ತು ನೌಕರರು ರಾಜ್ಯದ ಸಾಂಖ್ಯಿಕ ಕಚೇರಿಯ 200 ಅಧಿಕಾರಿಗಳು ಮತ್ತು ನೌಕರರು ಕೈಗೊಳ್ಳಲಿದ್ದಾರೆ.

ಮಾಹಿತಿ ಸಂಗ್ರಹಕ್ಕೆ ಕಾಮನ್ ಸರ್ವೀಸ್ ಸೆಂಟರ್ ಕಾರ್ಯ ನಿರ್ವಹಿಸಲಾಗುತ್ತಿದೆ. ಈಗಾಗಲೇ ಎಲ್ಲ ರಾಜ್ಯ, ರಾಷ್ಟಮಟ್ಟದಲ್ಲಿ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದ್ದು, ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರ್ಥಿಕ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯನ್ನು ರಾಜ್ಯ ಸೂಚಿಸುವ ವಿವಿಧ ನೀತಿ, ಯೋಜನೆಗಳಿಗೆ ಬಳಸಲಾಗುತ್ತದೆ. ಸಂಘಟಿತ, ಅಸಂಘಟಿತ ವಲಯಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಉದ್ದಿಮೆಗಳನ್ನು ಪಟ್ಟಿ ಮಾಡುವುದು, ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವಿವರ ಸಂಗ್ರಹಿಸುವುದು ಗಣತಿಯ ಮುಖ್ಯ ಉದ್ದೇಶ’
-ವಿ.ಮಂಜುಳಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಯೋಜನಾ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News