ಗೃಹ ಖರೀದಿದಾರರು ಸಾಲ ಪುನರುಜ್ಜೀವನಕ್ಕೆ ಬ್ಯಾಂಕುಗಳನ್ನು ಸಂಪರ್ಕಿಸಬಹುದು: ಕೇಂದ್ರ ಸರಕಾರ

Update: 2019-11-07 16:17 GMT

ಹೊಸದಿಲ್ಲಿ,ನ.7: ಸ್ಥಗಿತಗೊಂಡ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 25 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ ಮರುದಿನವೇ ಕೇಂದ್ರ ಸರಕಾರವು ಹೆಚ್ಚುವರಿ ಸಾಲ ಪಡೆಯಲು ಅಥವಾ ತಮ್ಮ ಸಾಲಗಳನ್ನು ಪುನರುಜ್ಜೀವಗೊಳಿಸಲು ಸಾಲ ನೀಡಿಕೆಯ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಗೃಹ ಖರೀದಿದಾರರಿಗೆ ಸಲಹೆ ನೀಡಿದೆ. ಆದರೆ ಉನ್ನತ ನ್ಯಾಯಾಲಯಗಳಲ್ಲಿ ಕಾನೂನು ಮೊಕದ್ದಮೆ ಎದುರಿಸುತ್ತಿರುವ ವಸತಿ ಯೋಜನೆಗಳಿಗೆ ಈ ಪ್ಯಾಕೇಜ್ ಅನ್ವಯಿಸುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

‘ವಿಶೇಷ ಗವಾಕ್ಷಿ’ ಯೋಜನೆ ಮೂಲಕ ನೆರವು ಕೋರುವ ಯಾವುದೇ ಒಂದು ಪೂರ್ಣಗೊಳ್ಳ ವಸತಿ ಯೋಜನೆಗೆ ಗರಿಷ್ಠ 400 ಕೋಟಿ ರೂ.ಗಳ ನೆರವು ದೊರೆಯಲಿದೆ ಅಥವಾ ಸುಮಾರು 4.58 ಲಕ್ಷ ವಸತಿಗಳನ್ನು ಒಳಗೊಂಡ 1508 ಪ್ರಾಜೆಕ್ಟ್‌ಗಳನ್ನು ಪೂರ್ತಿಗೊಳಿಸಲು ಪರ್ಯಾಯ ಹೂಡಿಕೆ ನಿಧಿಯನ್ನು ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಗೃಹ ಖರೀದಿದಾರರು ಹೆಚ್ಚುವರಿ ಸಾಲವನ್ನು ಪಡೆಯುವುದಕ್ಕಾಗಿ ಸಮರ್ಪಕ ವಾದ ಮಾರ್ಗದರ್ಶನವನ್ನು ಕೋರಲು ಅಥವಾ ಚಾಲ್ತಿಯಲ್ಲಿರುವ ತಮ್ಮ ಗೃಹಸಾಲಗಳನ್ನು ಕಾನೂನು ಮತ್ತು ಶಾಸನಾತ್ಮಕ ಚೌಕಟ್ಟಿನಲ್ಲಿ ಪುನರುಜ್ಜೀವನಗೊಳಿಸಲು ಆಯಾ ಸಾಲ ಸಂಸ್ಥೆಗಳನ್ನು ಸಂಪರ್ಕಿಸಬೇಕು’’ ಎಂದು ಹಣಕಾಸು ಸಚಿವಾಲಯವು ಈ ವಿಷಯವಾಗಿ ಬಿಡುಗಡೆಗೊಳಿಸಿರುವ ಪ್ರಶ್ನೋತ್ತರಾವಳಿಯಲ್ಲಿ (ಎಫ್‌ಎಕ್ಯೂ)ತಿಳಿಸಿದೆ.

ಆದರೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ಗಳಲ್ಲಿ ಕಾನೂನು ಮೊಕದ್ದಮೆ ಎದುರಿಸುತ್ತಿರುವ ಪ್ರಾಜೆಕ್ಟ್‌ಗಳಲ್ಲಿ ಪ್ರಸ್ತಾಪಿತ ಎಐಎಫ್ ಹೂಡಿಕೆ ಮಾಡುವುದಿಲ್ಲವೆಂದು ಪ್ರಶ್ನೋತ್ತರಾವಳಿಯಲ್ಲಿ ತಿಳಿಸಲಾಗಿದೆ.

ಹಣಕಾಸಿನ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿರುವ ವಸತಿ ಪ್ರಾಜೆಕ್ಟ್‌ಗಳಿಗೆ ಮಾತ್ರವೇ ಈ ವಿಶೇಷ ಗವಾಕ್ಷಿ ಯೋಜನೆ ಗಮನಹರಿಸಲಿದೆ.

ನಿಷ್ಕ್ರಿಯ ಆಸ್ತಿಗಳು (ಎನ್‌ಪಿಎಗಳು) ಅಥವಾ ಎನ್‌ಸಿಎಲ್‌ಟಿ (ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ)ಯ ವಿಚಾರಣೆ ಕಲಾಪಗಳಿಗೆ ಒಳಗಾಗಿರುವ ವಸತಿ ಪ್ರಾಜೆಕ್ಟ್‌ಗಳ ಬಗ್ಗೆಯೂ ಅದು ಗಮನಹರಿಸಲಿದೆ ಎಂದು ತಿಳಿಸಲಾಗಿದೆ. ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಸನಿಹಕ್ಕೆ ಬಂದಿರುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

 ಮನೆ ಖರೀದಿದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗೃಹ ಸಾಲಿಗರು ಹಾಗೂ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶೇಷ ಗವಾಕ್ಷಿ ಮೂಲಕ ಬಗೆಹರಿಸಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News