ದೇಶಿ ಭಾಷೆಗಳ ನಡುವೆ ಅನುವಾದ ಹೆಚ್ಚಾಗಲಿ: ಡಾ.ಎಚ್.ಎಸ್. ವೆಂಕಟೇಶಮೂರ್ತಿ

Update: 2019-11-07 16:26 GMT

ಬೆಂಗಳೂರು, ನ.7: ದೇಶಿ ಭಾಷೆಗಳ ನಡುವೆ ಕೃತಿಗಳ ಅನುವಾದ ಹೆಚ್ಚಾಗಬೇಕು ಎಂದು ಹಿರಿಯ ಸಾಹಿತಿ ಡಾ. ಎಚ್.ಎಸ್ ವೆಂಕಟೇಶಮೂರ್ತಿ ಹೇಳಿದರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಿಂದ ನೇಪಾಳಿ ಭಾಷೆಗೆ ಮತ್ತು ನೇಪಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ 10 ಗ್ರಂಥಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದೇಶಿ ಸಾಹಿತಿಗಳ ಅನೇಕ ಪ್ರಸಿದ್ಧ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ. ಆದರೆ, ನಮ್ಮ ದೇಶಿ ಭಾಷೆ-ಭಾಷೆಗಳ ನಡುವೆ ಕೃತಿಗಳ ಅನುವಾದ ತೀರಾ ಕಡಿಮೆ ಇದೆ. ನಮ್ಮ ನೆರೆಯ ರಾಜ್ಯಗಳಲ್ಲಿ ಅನೇಕ ಪ್ರಸಿದ್ಧ ಸಾಹಿತಿಗಳು ಇದ್ದಾರೆ, ಆದರೆ, ನಮಗೆ ಅವರ ಬಗ್ಗೆ ಏನು ಗೊತ್ತಿಲ್ಲ. ಇನ್ನಾದರು ದೇಶಿಯ ಭಾಷೆಗಳ ಅನುವಾದ ಹೆಚ್ಚಾಗಲಿ ಎಂದರು.

ನೇಪಾಳಿ ಕಾವ್ಯಗಳು ಉನ್ನತ ಸಾಧನೆ ಮಾಡಿವೆ. ಉತ್ತಮ ಸಂದೇಶ ಹೊಂದಿದ್ದಾವೆ. ನೇಪಾಳಿ ಕಾವ್ಯ ಅನುವಾದವಾಗಿ ಕನ್ನಡಕ್ಕೆ ಬಂದಿದ್ದರಿಂದ ಸಾಹಿತಿಗಳಿಗೆ ಹೊಸ ಸಾಧ್ಯತೆ ತೋರಿಸಲಿದೆ ಎಂದರು.

ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ಕನ್ನಡ ಸಾಹಿತ್ಯದ ಹಳೆಗನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಹಳಗನ್ನಡ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಸ್ನಾತಕೋತ್ತರ ಶಿಕ್ಷಣದಲ್ಲಿ ಐಚ್ಛಿಕ ಕನ್ನಡದಲ್ಲಿ ಗಮಕಿಗಳ ಸಹಾಯದಿಂದ ಹಳಗನ್ನಡವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಾದ ಆಧುನಿಕ ನೇಪಾಳಿ ಕವನಗಳು, ವಿಚಾರ ಸಾಹಿತ್ಯ, ಭಾರತ ಶಾಶ್ವತ ಅವಾಜ್, ಪಂಪ ಭಾರತಂ, ನಾಲ್ವಡಿ ಕೃಷ್ಣರಾಜ ಒಡೆಯರ ಚರಿತ್ರೆ, ಕನ್ನಡ ನಾಡಿನ ಚರಿತ್ರೆ ಭಾಗ-1 ಮತ್ತು 2, ಆದಿಪುರಾಣಂ, ಕನ್ನಡ ವ್ಯಾಕರಣ ದರ್ಪಣ, ಕಾಯಕ ನಿರತ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್, ನೇಪಾಳದ ಸಾಹಿತಿ ಮೊಮಿಲಾ ಜೋಶಿ, ಡಾ. ಪದ್ಮರಾಜ ದಂಡಾವತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News