ಮಹಾದೇವರ ಕವನಗಳು ವ್ಯವಸ್ಥೆಯ ವಿಡಂಬನೆಯ ಸ್ಥಿತಿ ಬಿಂಬಿಸುತ್ತವೆ: ಸಿ.ಎನ್.ರಾಮಚಂದ್ರನ್

Update: 2019-11-07 16:29 GMT

ಬೆಂಗಳೂರು, ನ.7: ಹಂಸ ನಮ್ಮ ಸಂಸ್ಕೃತಿಯ ಭಾಗವಾಗಿ ಅನೇಕ ಧ್ವನಿಗಳನ್ನು ಹೊಂದಿದೆ, ಕೆಲವು ಕವನಗಳು ವ್ಯವಸ್ಥೆಯ ವಿಡಂಬನೆಯ ಸ್ಥಿತಿಯನ್ನು ಬಿಂಬಿಸುತ್ತವೆ ಕನ್ನಡ, ಕನ್ನಡಿಗ ಆಧುನಿಕತೆಯಲ್ಲಿ ಇನ್ನೂ ಉನ್ನತ ಸ್ಥಾನ ಪಡೆಯಬೇಕೆಂದು ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ಹೇಳಿದ್ದಾರೆ.

ಗುರುವಾರ ನಗರದ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕವಿ ಸತ್ಯಮಂಗಲ ಮಹಾದೇವ ಅವರ ಪಂಚವರ್ಣದ ಹಂಸ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಅವರು, ಹಂಸ-ಪರಮಹಂಸ-ಪ್ರಜ್ಞಾಸ್ಥರ-ಯೋಗಶಾಸ್ತ್ರದ ಪರಿಕಲ್ಪನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಹಂಸ ನಮ್ಮ ಸಂಸ್ಕೃತಿಯ ಭಾಗವಾಗಿ ಅನೇಕ ಧ್ವನಿಗಳನ್ನು ಹೊಂದಿದೆ. ಕವನಗಳು ಯೋಗಸ್ಥರದಲ್ಲಿ ಎತ್ತರದ ಪರಿಕಲ್ಪನೆ, ಅನೇಕ ಬಗೆಯ ಆಶಯಗಳನ್ನು ಹೊಂದಿವೆ. ಕೆಲವು ಕವನಗಳು ವ್ಯವಸ್ಥೆಗಳ ವಿಡಂಬನೆಯ ಸ್ಥಿತಿಯನ್ನು ಬಿಂಬಿಸುತ್ತವೆ ಎಂದು ತಿಳಿಸುತ್ತಾ, ಕನ್ನಡ, ಕನ್ನಡಿಗ ಆಧುನಿಕತೆಯಲ್ಲಿ ಇನ್ನೂ ಉನ್ನತ ಸ್ಥಾನ ಪಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕರ್ನಾಟಕ ಸಂಸ್ಕೃತ ವಿವಿಯ ಮಾಜಿ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಸಂಜೆ ಕಾಲೇಜಿಗೆ ಉತ್ತಮ ಇತಿಹಾಸವಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಭಿವೃದ್ಧಿಯನ್ನು ವ್ಯಕ್ತಪಡಿಸುವಂತಹ ಕೃತಿ ಲೋಕಾರ್ಪಣೆ ಕೆಲಸವನ್ನು ಶೇಷಾದ್ರಿಪುರಂ ಕಾಲೇಜು ಮಾಡುತ್ತಿದೆ ಎಂದು ಹೇಳಿದರು.

ಕವಿ ಸತ್ಯಮಂಗಲ ಮಹಾದೇವ ಮಾತನಾಡಿ, ನಾನು ಬಿದಿರು ಕೊಳವೆ ಮಾತ್ರ, ನಿಮ್ಮೆಲ್ಲರ ಸ್ವರವ್ನು ನಾನು ಬಿಂಬಿಸುತ್ತೇನೆ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವೂಡೇ ಪಿ. ಕೃಷ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಶೋಕ್ ಧರ್ಮದರ್ಶಿ, ಪ್ರಾಂಶುಪಾಲ ಪ್ರೊ.ಎನ್.ಎಸ್. ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News