ಪಿಎಂಸಿ ಬ್ಯಾಂಕ್ ಲೆಕ್ಕಪತ್ರ, ದಾಖಲೆಗಳ ತಪಾಸಣೆ: ಆರ್‌ಬಿಐ

Update: 2019-11-07 16:49 GMT

ಹೊಸದಿಲ್ಲಿ, ನ.7: ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ತನ್ನ ಪರಿಸ್ಥಿತಿಯ ಮೇಲೆ ನಿಕಟವಾದ ನಿಗಾವನ್ನು ಇರಿಸಿರುವುದಾಗಿ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ತಿಳಿಸಿದ್ದಾರೆ. ಬ್ಯಾಂಕ್‌ನ ಲೆಕ್ಕಪತ್ರಗಳು ಹಾಗೂ ದಾಖಲೆಗಳ ಫಾರೆನ್ಸಿಕ್ ತಪಾಸಣೆ ನಡೆಸಲಾಗುತ್ತಿದೆಯೆಂದು ಅವರು ತಿಳಿಸಿದ್ದಾರೆ.

ಪಿಎಂಸಿ ಬ್ಯಾಂಕ್ 4355 ಕೋಟಿ ರೂ.ಗಳನ್ನು ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಎಚ್‌ಡಿಐಎಲ್‌ಗೆ ಅಕ್ರಮವಾಗಿ ವರ್ಗಾವಣೆಗೊಳಿಸಿರುವುದು ಪತ್ತೆಯಾದ ಬಳಿಕ ಆ ಬ್ಯಾಂಕ್‌ನ ಖಾತೆದಾರರು ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯುವುದಕ್ಕೆ ನಿರ್ಬಂಧಗಳನ್ನು ವಿಧಿಸಿತ್ತು.

  ಮಂಗಳವಾರದಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಗದು ಹಿಂಪಡೆತದ ಮಿತಿಯನ್ನು ಪ್ರತಿಖಾತೆಗೆ 50 ಸಾವಿರ ರೂ.ಗಳಿಗೆ ವಿಸ್ತರಿಸಿದೆ. ಪಿಎಂಸಿ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೇರ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಅದು ಆ ಬ್ಯಾಂಕ್‌ನ ಠೇವಣಿದಾರರ ನಗದು ಹಿಂತೆಗೆತದ ಮಿತಿಯನ್ನು ವಿಸ್ತರಿಸಿರುವುದು ನಾಲ್ಕನೆ ಸಲವಾಗಿದೆ.

ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಎಚ್‌ಡಿಐಎಲ್ ಪ್ರವರ್ತಕರಾದ ರಾಕೇಶ್ ಹಾಗೂ ಸಾರಂಗ್ ವಧ್ವಾನ್ ಸೇರಿದಂತೆ ಐವರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News